Select Your Language

Notifications

webdunia
webdunia
webdunia
webdunia

ಶಾರುಖ್- ಸುಶ್ ಜೋಡಿಯ ದುಲ್ಹಾ ಮಿಲ್ ಗಯಾ

ಶಾರುಖ್- ಸುಶ್ ಜೋಡಿಯ ದುಲ್ಹಾ ಮಿಲ್ ಗಯಾ
IFM
ಅಂತೂ ಐದು ವರ್ಷಗಳ ನಂತರ ಮತ್ತೊಂದು ಹಿಟ್ ಜೋಡಿ ಮತ್ತೆ ಜೋಡಿಯಾಗುವ ಕಾಲ ಸನ್ನಿಹಿತವಾಗಿದೆ. ಮೈ ಹೂ ನಾ ಚಿತ್ರದಲ್ಲಿ ಗ್ಲಾಮರಸ್ ಮೇಡಮ್ ಆಗಿ ಕಾಣಿಸಿಕೊಂಡಿದ್ದ ಸುಶ್ಮಿತಾ ಹಾಗೂ ಶಾರುಖ್ ಜೋಡಿ ಬಾಲಿವುಡ್‌ನ ಹಿಟ್ ಜೋಡಿಗಳಲ್ಲಿ ಒಂದಾಗಿತ್ತು. ಆದರೆ ಹಲವು ಕಾರಣಗಳಿಂದ ಈ ಜೋಡಿಯ ಬಹುನಿರೀಕ್ಷಿತ ಚಿತ್ರ ಸದ್ಯದಲ್ಲೇ ಬಿಡುಗಡೆಯ ಭಾಗ್ಯ ಕಾಣಲಿದೆ. ಹಲವು ಸಮಯದಿಂದ ತಡೆಹಿಡಿದಿದ್ದ ಈ ಜೋಡಿಯ ದುಲ್ಹಾ ಮಿಲ್ ಗಯಾ ಚಿತ್ರ ಕೊನೆಗೂ ಇದೇ ಜುಲೈ ತಿಂಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ಸಹಾಯಕ ನಿರ್ಮಾಪಕ ಅನುಜ್ ಸಕ್ಸೇನಾ ಹೇಳಿಕೊಂಡಿದ್ದಾರೆ.

ಈ ಚಿತ್ರ ಸುಶ್ಮಿತಾಳ ಕೆರಿಯರ್ ದೃಷ್ಠಿಯಿಂದ ಮಹತ್ವದ್ದಾಗಿದೆ. ಆಕೆ ಶಾರುಖ್ ಜತೆಗೆ ನಟಿಸಿದ ಮೈ ಹೂ ನಾ ಹಿಟ್ ಚಿತ್ರವಾಗಿತ್ತು. ನಂತರ ಶಾರುಖ್ ಜತೆಗೆ ಸಿಕ್ಕಿದ ಆಕೆಯ ಎರಡನೇ ಚಿತ್ರ ಇದಾಗಿದ್ದು, ಈ ಚಿತ್ರದ ಮೂಲಕವಾದರೂ ಬ್ರೇಕ್ ಪಡೆಯಲು ಹವಣಿಸಿದ್ದಳು. ಆದರೆ ಚಿತ್ರ ಅರ್ಧದಲ್ಲೇ ನಿಂತಿದ್ದು ಆಕೆಯ ಆಸೆಗೆ ತಣ್ಣೀರೆರಚಿದಂತೆ ಆಗಿತ್ತು. ಈಗ ಮತ್ತೆ ಚಿತ್ರದ ಕೆಲಸ ಚಿಗುರೊಡೆದಿರುವುದು ಸುಶ್ಮಿತಾ ಮುಖದಲ್ಲಿ ನಗು ಮೂಡಿಸಿದೆ.

ದುಲ್ಹಾ ಮಿಲ್ ಗಯಾ ಚಿತ್ರ ಅರ್ಧಕ್ಕೆ ನಿಂತಿರುವುದಕ್ಕೆ ಪ್ರಮುಖ ಕಾರಣ ಶಾರುಖ್ ಖಾನ್ ಎಂದೇ ಹೇಳಲಾಗುತ್ತಿದೆ. ಐಪಿಎಲ್, ಇತರ ಚಿತ್ರಗಳ ಶೂಟಿಂಗ್, ಹಳೇ ಡೇಟ್ಸ್, ಭುಜದ ನೋವು ಹೀಗೆ ಒಂದಾದ ನಂತರ ಒಂದು ತೊಡಕುಗಳನ್ನು ಎದುರಿಸುತ್ತಲೇ ಹೋದ ಶಾರುಖ್ ಕಾರಣದಿಂದ ಈ ಚಿತ್ರ ಅರ್ಧಕ್ಕೆ ನಿಂತಿತ್ತು. ಶಾರುಖ್ ಡೇಟ್ ಹೊಂದಿಸುವುದೇ ನಮಗೆ ದೊಡ್ಡ ಹೊರೆಯಾಗಿದೆ ಎಂದು ಅನಿಲ್ ಅಂಬಾನಿಯವರ ಬಿಗ್ ಬ್ಯಾನರ್ ನಿರ್ಮಾಪಕರು ಹೇಳಿಕೊಂಡಿದ್ದರು. ಈಗ ಅಂತೂ ಚಿತ್ರ ಹೊರಬರುವ ಎಲ್ಲ ನಿರೀಕ್ಷೆ ಪಕ್ಕಾಗೊಂಡಿದೆ.

webdunia
IFM
ಅಂದಹಾಗೆ ಈ ಚಿತ್ರದಲ್ಲಿ ಸುಶ್ಮಿತಾ ಹಾಗೂ ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಸುಶ್ಮಿತಾ- ಶಾರುಖ್‌ದು ಇದರಲ್ಲಿ ಪ್ರಮುಖ ಪಾತ್ರವಾದರೂ ವಿಶೇಷ ಪಾತ್ರ ಎಂದಷ್ಟೇ ಚಿತ್ರತಂಡ ಸುಳಿವು ನೀಡಿದೆ. ಉಳಿದುದನ್ನು ತೆರೆಯ ಮೇಲೆಯೇ ಕಾದು ನೋಡಬೇಕು. ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳಿವೆ. ಶಾರುಖ್ ರಾಜ್ ಒಬೆರಾಯ್ ಆಗಿ ಕಾಣಿಸಿಕೊಂಡರೆ, ಮಾಜಿ ಭುವನ ಸುಂದರಿ ಸುಶ್ಮಿತಾ ಲಿಸಾ ಪಾತ್ರದಲ್ಲಿರಲಿದ್ದಾರೆ. ಉಳಿದಂತೆ ಫರ್ದೀನ್ ಖಾನ್ ಶಶಾಂಕ್ ಆಗಿ ತಾರಾ ಶರ್ಮಾ ಜೆಸ್ಸಿಕಾ ಆಗಿ ತೆರೆಯಲ್ಲಿದ್ದಾರೆ. ಚಿತ್ರವನ್ನು ಟ್ರಿನಿಡಾಡ್, ಟೊಬ್ಯಾಗೋ, ಮಲೇಶಿಯಾ ಹಾಗೂ ಸ್ಪೈನ್‌ಗಳಲ್ಲಿ ನಡೆದಿದೆ. ಶಾರುಖ್ ಟ್ರಿನಿಡಾಡ್ ಮೂಲದ ಬ್ಯುಸಿನೆಸ್‌ಮನ್ ಪಾತ್ರ ನಿಭಾಯಿಸಲಿದ್ದಾರೆ.

ಇದಲ್ಲದೆ, ಮುದ್ದಾಸರ್ ಅಜೀಜ್ ಅವರ ನಿರ್ದೇಶನದ ಮೊದಲ ಚಿತ್ರವಿದು. ಹಾಗಾಗಿ ಇದು ಸಾಕಷ್ಟು ಪ್ರಚಾರವನ್ನೂ ಗಿಟ್ಟಿಸಿತ್ತು. ಆದರೆ ಮೂರು ವರ್ಷಗಳಿಂದ ಚಿತ್ರ ಪೂರ್ಣ ಹಂತಕ್ಕೆ ಬಂದಿಲ್ಲ. ಚಿತ್ರದ ನಿರ್ಮಾಪಕ ವಿವೇಕ್ ವಾಸ್ವಾನಿ. ಅವರೂ ಕೂಡಾ ಈ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಚಿತ್ರಕಥೆ, ಸಂಭಾಷಣೆ ಎಲ್ಲವೂ ವಾಸ್ವಾನಿ ಹಾಗೂ ಅಜೀಜ್ ಅವರದ್ದು.

ಅಂದಹಾಗೆ, ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಸುಶ್ಮಿತಾ ಸೇನ್ ಹಾಗೂ ನಿರ್ದೇಶಕ ಮುದ್ದಾಸರ್ ಅಜೀಜ್ ಅವರ ನಡುವೆ ಈ ಚಿತ್ರೀಕರಣದ ಸಂದರ್ಭವೇ ಪ್ರೇಮಾಂಕುರವಾಗಿದ್ದು. ಹಾಗಾಗಿ ತನ್ನ ಹಳೆಯ ಬಾಯ್ ಫ್ರೆಂಡಿಗೂ ಸುಶ್ ಕೈ ಕೊಟ್ಟಳು. ಆದರೆ ಇದೀಗ ಮುದ್ದಾಸರ್ ಮಾಧ್ಯಮದ ಎದುರೆಲ್ಲಾ ತಮ್ಮಿಬ್ಬರ ಅಫೇರ್ ಬಗ್ಗೆ ಹೇಳುತ್ತಿರುವುದರಿಂದ ಸುಶ್‌ಗೆ ಸಹಜವಾಗಿಯೇ ಸಿಟ್ಟು ಬಂದಿದೆ. ಹಾಗಾಗಿ, ಅಜೀಜ್‌ನಿಂದ ದೂರವೇ ಇರತೊಡಗಿದ್ದಾಳೆ. ಆದರೆ, ಇತ್ತೀಚೆಗೆ ಇವರ ಪ್ರೇಮದ ಕೊಂಡಿಯೂ ಕಳಚಿದೆ ಅಂತ ಸುದ್ದಿಯಾಗಿದೆ. ಒಟ್ಟಿನಲ್ಲಿ ದುಲ್ಹಾ ಮಿಲ್‌ ಗಯಾ ಹಲವು ವಿಶೇಷಗಳಿಂದ ಕುತೂಹಲ ಮೂಡಿಸಿದೆ.
webdunia
IFM

Share this Story:

Follow Webdunia kannada