Select Your Language

Notifications

webdunia
webdunia
webdunia
webdunia

ಬರಲಿದೆ ಟ್ರ್ಯಾಜಿಕ್ ಕಾಮಿಡಿ `ಸ್ಟ್ರೈಟ್'

ಬರಲಿದೆ ಟ್ರ್ಯಾಜಿಕ್ ಕಾಮಿಡಿ `ಸ್ಟ್ರೈಟ್'
IFM
ಮಧ್ಯ ಲಂಡನ್‌ನಲ್ಲಿ `ಗೇಲಾರ್ಡ್' ಎಂಬ ರೆಸ್ಟೋರೆಂಟ್ ನಡೆಸುವ ಭಾರತೀಯ ಮೂಲದ ಪಿನು ಎಂಬಾತನ ಸುತ್ತ ಸುತ್ತುವ ತಮಾಷೆಯ ಕಥೆ `ಸ್ಟ್ರೈಟ್'. ಯಾವುದೇ ಹುಡುಗಿಯರ ತಂಟೆಗೂ ಹೋಗದೆ ಸಾದಾ ಜೀವನ ನಡೆಸುತ್ತಿರುತ್ತಾನೆ ಪಿನು. ಜನರಿಂದ ನಗೆಪಾಟಲಿಗೀಡಾಗುವುದು ಅಂದರೆ ಪಿನುಗೆ ಭಾರೀ ಹೆದರಿಕೆ. ಸ್ವಲ್ಪ ಅಂತರ್ಮುಖಿ. ಯಾವ ಗೆಳೆಯರ ನಂಟೂ ಬೇಡ. ಇಂತಿಪ್ಪ ಹಲವು `ಕಾಂಪ್ಲೆಕ್ಸ್‌'ಗಳಿರುವ ಪಿನುಗೆ ಇರುವ ಏಕಮಾತ್ರ ಗೆಳೆಯ ಆತನ ಸಾಕು ಸೋದರ ರಜತ್ ಮಾತ್ರ. ರಾಕ್ ಬ್ಯಾಂಡ್ ಒಂದರ ಹಾಡುಗಾರನಾದ ರಜತ್‌ಗೂ ಪಿನು ಎಂದರೆ ಅತಿ ಮುದ್ದು.

ಒಂದು ದಿನ ಕಮಲೇಶ್ ಎಂಬ ಇಂಡಿಯನ್ ಪಿನುವಿನ ರೆಸ್ಟೋರೆಂಟ್‌ಗೆ ಬರುತ್ತಾನೆ. ತನಗೆ ರೆಸ್ಟೋರೆಂಟ್‌ನಲ್ಲಿ ಹಾಸ್ಯನಟನ ಕೆಲಸ ಬೇಕೆಂದು ಕೇಳುತ್ತಾನೆ. ಪಿನು ಮೊದಲು ಕೆಲಸ ಖಾಲಿ ಇಲ್ಲವೆಂದು ಹೇಳಿದರೂ ನಂತರ ಅಡುಗೆ ಕೆಲಸವನ್ನು ನೀಡುತ್ತಾನೆ. ಜತೆಗೆ ಸಂಜೆಯ ವೇಳೆಗೆ ರೆಸ್ಟೋರೆಂಟ್ನಲ್ಲೇ ಜನರನ್ನು ನಗಿಸುವ ಕೆಲಸ ಮಾಡಬಹುದೆಂದು ಹೇಳುತ್ತಾನೆ. ಇದೇ ಸಂದರ್ಭ ಭಾರತ ಮೂಲದ ಕಲಾ ವಿದ್ಯಾರ್ಥಿನಿಯಾದ ರೇಣು ಎಂಬಾಕೆಯನ್ನೂ ರೆಸ್ಟೋರೆಂಟ್‌ನಲ್ಲಿ ಕ್ಯಾಷಿಯರ್ ಆಗಿ ನೇಮಿಸಿಕೊಳ್ಳುತ್ತಾನೆ. ಆಕೆಗೆ ಕ್ಯಾರಿಕೇಚರ್ ಬಿಡಿಸುವ ಹವ್ಯಾಸವಿರುತ್ತದೆ. ಈ ಇಬ್ಬರ ಎಂಟ್ರಿಯಿಂದ ರೆಸ್ಟೋರೆಂಟ್‌ನ ಚೆಹರೆಯೇ ಬದಲಾಗುತ್ತದೆ. ರೇಣುವಿನ ಕ್ಯಾರಿಕೇಚರ್ ಹಾಗೂ ಕಮಲೇಶರ ಹಾಸ್ಯ ನಟನೆ ಹೆಚ್ಚು ಜನರನ್ನು ಈ ರೆಸ್ಟೋರೆಂಟ್‌ನೆಡೆಗೆ ಎಳೆದು ತರುತ್ತದೆ. ಜತೆಗೆ ಈ ಇಬ್ಬರು ಪಿನು ಜೀವನದಲ್ಲಿ ಗಳೆತನದ ಬೆಸುಗೆಯನ್ನೂ ಬೆಸೆಯುತ್ತಾರೆ. ಇದು ಪಿನು ನಡತೆಯಲ್ಲೂ ಬದಲಾವಣೆ ತರುತ್ತದೆ.

ಹೀಗೇ ಒಂದು ದಿನ ಇದ್ದಕ್ಕಿದ್ದಂತೆ ಪಿನುವಿನಲ್ಲಿ ಹೊಸ ದಿಗ್ಬ್ರಾಂತಿ ಮೂಡಿಸುತ್ತದೆ. ತಾನು ಸಲಿಂಗಕಾಮಿ ಇರಬಹುದೇ ಎಂಬ ಸಂಶಯ ಆತನದ್ದು. ತನ್ನ ಸೋದರ ರಜತ್ ಹುಡುಗಿಯೊಬ್ಬಳನ್ನು ಪಟಾಯಿಸಲು ಹೇಳಿದ್ದೇ ಅವನಿಗೆ ಈ ಸಂಶಯ ಬರಲು ಕಾರಣ. ಈ ಎಲ್ಲಾ ಸಂಶಯಗಳಿಂದ ಪಿನು ತೊಳಲಾಡಿ ತಾನೂ ಹುಡುಗಿಯೊಬ್ಬಳ ಲೈಂಗಿಕ ಸುಖಕ್ಕಾಗಿ ಹಾತೊರೆದು ನಂತರ ತಾನೇ ಆ ಮಾನಸಿಕ ತೊಳಲಾಟದಲ್ಲಿ ಸಿಕ್ಕು ಬಳಲುತ್ತಾನೆ. ಒಟ್ಟಾರೆ, ಪಿನುವಿನ ಟ್ರ್ಯಾಜಿಕ್ ಸ್ಥಿತಿಯನ್ನು ಕಾಮಿಕ್ ರೂಪದಲ್ಲಿ ತೋರಿಸಲಾಗಿದೆಯಂತೆ. ಇದು ಸ್ಟ್ರೈಟ್‌ನ ನೇರವಂತಿಕೆ. ಕೊನೆಗೂ ಪಿನು ಲವ್ ಸ್ಟೋರಿ ಸ್ಟ್ರೈಟ್‌ನ ಕ್ಲೈಮ್ಯಾಕ್ಸ್.

ವಿನಯ್ ಪಾಠಕ್, ಗುಲ್ ಪನಾಗ್, ಅನುಜ್ ಚೌಧರಿ, ಸಿದ್ಧಾರ್ಥ್ ಮಕ್ಕರ್, ರಸಿಕ್ ದಾವೆ ಮತ್ತಿತರರ ತಾರಾಗಣವಿರುವ ಸ್ಟ್ರೈಟ್‌ ಸಿನಿಮಾವನ್ನು ಪ್ರೇಕ್ಷಕರು ನೇರವಾಗಿಯೇ ಇಷ್ಟಪಡಬೇಕೆಂಬ ಮಹದಾಸೆ ನಿರ್ದೇಶಕರಾದ ಪಾರ್ವತಿ ಬಾಲಗೋಪಾಲನ್ ಅವರದು. ಸಾಗರ್ ದೇಸಾಯಿ ಸಂಗೀತವಿದೆ. ಈ ಚಿತ್ರದಲ್ಲಿ ವಿನಯ್ ಪಾಠಕ್‌ಗೆ ಲೊಚಲೊಚನೆ ಕಿಸ್ ಕೊಟ್ಟಿದ್ದಾಳೆ ಎಂಬ ಮೂಲಕ ಗುಲ್ ಪನಾಗ್ ಎಂಬ ಸುಂದರಿ ಸ್ಟ್ರೈಟ್‌ನ ಖ್ಯಾತಿಯನ್ನೂ ಹೆಚ್ಚಿಸಿದ್ದಳು. ಈ ಹಿಂದೆಯೇ ಮ್ಯಾಕ್ಸಿಮ್ ಮ್ಯಾಗಜಿನ್‌ನಲ್ಲಿ ಬಿಚ್ಚಿ ಸುದ್ದಿಯಾದ ಗುಲ್ ಪನಾಗ್ ಸ್ಟ್ರೈಟ್‌ನಲ್ಲಿ ಪ್ರೇಕ್ಷಕರನ್ನು ತನ್ನ `ನೇರ'ವಂತಿಕೆಯಿಂದ ಮೋಡಿ ಮಾಡುತ್ತಾಳೋ ಅನ್ನೋದನ್ನು ಕಾದು ನೋಡಬೇಕು. ಚಿತ್ರದಲ್ಲಿ ಹಾಸ್ಯದ ಜತೆ ಜತೆಗೆ ಧಾರಾಳ ರೊಮ್ಯಾನ್ಸು, ಕಿಸ್ಸು ಇದೆಯಂತೆ. ಪ್ರೇಕ್ಷಕ ಮಹಾಶಯ ಗುಲ್ ಪನಾಗ್‌ ಮಾದಕತೆಗೆ ಬೌಲ್ಡ್ ಆಗುತ್ತಾನೋ, ಹಾಸ್ಯ ಲೇಪಿತ ಕಥೆಗೆ ಮರುಳಾಗುತ್ತಾನೋ ಅಂತ ನಿರ್ಧರಿಸಲು ಇನ್ನೂ ಕಾಲ ಬೇಕು. ಅಂದಹಾಗೆ, ಈ ಚಿತ್ರ ಮಾರ್ಚ್ ಆರರಂದು ಬಿಡುಗಡೆಯಾಗಲಿದೆ.
webdunia
IFM

Share this Story:

Follow Webdunia kannada