Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿಯಲ್ಲಿ 45 ಲಕ್ಷ ಮೌಲ್ಯದ ಕಪ್ಪು ಹಣದ ವಶ

ಹುಬ್ಬಳ್ಳಿಯಲ್ಲಿ 45 ಲಕ್ಷ ಮೌಲ್ಯದ ಕಪ್ಪು ಹಣದ ವಶ
, ಶುಕ್ರವಾರ, 14 ಮಾರ್ಚ್ 2014 (17:46 IST)
PR
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಪ್ಪು ಹಣದ ಹಾವಳಿಯು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಹಾಗೂ ಚುನಾವಣೆ ಆಯೋಗದ ನಿದ್ದೆಗೆಡಿಸುತ್ತಿದೆ.ಯಾವುದೇ ದಾಖಲೆಗಳಿಲ್ಲದೆ, ಸುಮಾರು ರೂ. 45 ಲಕ್ಷಗಳನ್ನು ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹುಬ್ಬಳ್ಳಿ ಉಪನಗರ ಪೊಲೀಸರು ಬಂಧಿಸಿ, ಅವರಲ್ಲಿದ್ದ ಕಪ್ಪು ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತರು ಮೂಲತಃ ಗುಜರಾತಿನವರು ಎನ್ನಲಾಗುತ್ತಿದ್ದು, ಭರತ ಬಾಬೂಜಿ ಸೋಳಂಕಿ ಮತ್ತು ರಮಣಸಿಂಗ್ ಪ್ರತಾಪಸಿಂಗ್ ಪರಮಾರ ಎಂದು ಗುರುತಿಸಲಾಗಿದೆ. ಇವರು ಗುರುವಾರ ರಾತ್ರಿ ಚೆನ್ನಮ್ಮ ವೃತ್ತದ ಬಳಿ ತಿರುಗಾಡುತ್ತಿದ್ದು, ಸಂಶಯ ಬಂದ ಪೊಲೀಸರು ಅವರನ್ನು ಉಪನಗರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರ ಬಳಿ ಸೂಕ್ತ ದಾಖಲೆಗಳಿಲ್ಲದ ರೂ. 45 ಲಕ್ಷ ಹಣವಿರುವುದು ಪತ್ತೆಯಾಗಿದೆ.

ಹಲವಾರು ಪಾಕೆಟುಗಳಿರುವ ಜರ್ಕಿನನ್ನು ಧರಿಸಿದ್ದ ಇವರು, ಅದರಲ್ಲಿ ರೂ. 1000, ರೂ. 500ರ ನೋಟಿನ ಕಟ್ಟುಗಳನ್ನು ಬಚ್ಚಿಟ್ಟುಕೊಂಡಿದ್ದರು. ಒಬ್ಬೊಬ್ಬರ ಜಾಕೆಟ್ನಲ್ಲಿ ರೂ. 22.5 ಲಕ್ಷವಿರುವುದು ಪತ್ತೆಯಾಗಿದೆ. ಆರೋಪಿಗಳಲ್ಲಿ ಹಣದ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ, ಹುಬ್ಬಳ್ಳಿಯ ಮಾರುತಿ ಕೋರಿಯರ್ ನವರು ಈ ಹಣವನ್ನು ಮಂಗಳೂರಿನ ನಟವರ್ ಎಂಬುವವರಿಗೆ ತಲುಪಿಸಲು ತಿಳಿಸಿದ್ದರು ಎಂದು ಹೇಳಿದ್ದಾರೆ. ಆದರೆ ಅಂತಹ ಕೋರಿಯರ್ ಸಂಸ್ಥೆ ಹುಬ್ಬಳ್ಳಿಯಲ್ಲಿ ಎಲ್ಲೂ ಇಲ್ಲ.

ಪ್ರಕರಣ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಒಟ್ಟಿನಲ್ಲಿ ಪೊಲೀಸ್ ಇಲಾಖೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭರ್ಜರಿ ಬೇಟೆ ಮಾಡಿದೆ.

Share this Story:

Follow Webdunia kannada