Webdunia - Bharat's app for daily news and videos

Install App

ನಿಸರ್ಗ ರಮಣೀಯ ಮಡಿಕೇರಿಯ ರಾಜಾಸೀಟ್ ನೋಡಬನ್ನಿ ...

Webdunia
- ಬಿ.ಎಂ.ಲವಕುಮಾರ್
WD
ಕೊಡಗಿನ ಪ್ರವಾಸಿ ತಾಣಗಳ ಪೈಕಿ ಮಡಿಕೇರಿಯಲ್ಲಿರುವ ರಾಜಾಸೀಟ್ ಪ್ರಮುಖ ಸಂದರ್ಶನ ಯೋಗ್ಯ ತಾಣವಾಗಿದೆ. ಹಾಗಾಗಿ ಕೊಡಗು ಎಂದಾಕ್ಷಣ ಪ್ರವಾಸಿಗನ ಮನದಲ್ಲಿ ರಾಜಾಸೀಟಿನ ಚಿತ್ರ ಮೂಡುತ್ತದೆ. ಮುಂಜಾನೆ, ಸಂಜೆ ಮಾತ್ರವಲ್ಲ ಮಟಮಟ ಮಧ್ಯಾಹ್ನದಲ್ಲಿಯೂ ಇಲ್ಲಿ ತಂಗಾಳಿ ಬೀಸುತ್ತಿರುತ್ತದೆ. ಮಡಿಕೇರಿ ನಗರದ ಅಂಚಿನಲ್ಲಿ ನಿರ್ಮಾಣವಾಗಿರುವ ಈ ಉದ್ಯಾನದಿಂದ ಇಣುಕಿ ನೋಡಿದರೆ ಒಂದೆಡೆ ಮೈಜುಮ್ಮೆನಿಸುವ ಕಂದಕ ಕಂಡರೆ ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನವನ್ನು ಪುಳಕಗೊಳಿಸುತ್ತದೆ.

ದೂರದಲ್ಲಿ ಮುಗಿಲೆತ್ತರಕ್ಕೆ ಬೆಳೆದು ಪೈಪೋಟಿ ನೀಡಲೇನೋ ಎಂಬಂತೆ ನಿಂತಿರುವ ಗಿರಿಶಿಖರಗಳು... ಅವುಗಳ ನಡುವಿನ ಇಳಿಜಾರಿನಲ್ಲಿ ಬೆಳೆದು ನಿಂತಹೆಮ್ಮರಗಳು... ಕಾಫಿ, ಏಲಕ್ಕಿ ತೋಟಗಳ ನಡುವಿನ ಗದ್ದೆ ಬಯಲುಗಳು... ಕೆಳಗಿನ ಕಂದಕದ ಅಂಕುಡೊಂಕಾದ ರಸ್ತೆಯಲ್ಲಿ ಸಾಗಿ ಬರುವ ವಾಹನಗಳು... ಪಕ್ಕದ ಗುಡ್ಡದಲ್ಲಿ ಒತ್ತೊತ್ತಾಗಿ ಎದ್ದು ನಿಂತ ಜನವಸತಿಗಳು... ಹೀಗೆ ಒಂದೆರಡಲ್ಲ ಹತ್ತಾರು ಸುಂದರ ದೃಶ್ಯಗಳು ಕಣ್ಣಿಗೆ ರಾಚುತ್ತವೆ.

ಮುಂಜಾನೆಯಲ್ಲಿ ಸದಾ ಮಡಿಕೇರಿಗೆ ಮುತ್ತಿಕ್ಕುವ ಮಂಜಿಗೆ ರಾಜಾಸೀಟು ಸುಂದರ ದೃಶ್ಯ ಬರೆಯುವ ಕ್ಯಾನ್ವಾಸ್. ಗುಡ್ಡದಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಹಸಿರ ಮರಗಳ ಮೇಲೆಲ್ಲಾ ಬೆಳ್ಳಿಯಂತೆ ಸುರಿದು ಕಂದಕಗಳನ್ನೆಲ್ಲಾ ತುಂಬಿ ಮಂಜಿನ ಸಾಗರ ಸೃಷ್ಟಿಸಿ ನೋಡುಗರನ್ನು ತಬ್ಬಿಬ್ಬುಗೊಳಿಸುವ... ಆ ಗುಡ್ಡ ಈ ಗುಡ್ಡ ಮಧ್ಯದ ಕಣಿವೆಗೆ ಸೇತುವೆ ಕಟ್ಟಿ ಒಂದೆಡೆಯಿಂದ ಮತ್ತೊಂದೆಡೆಗೆ ಲಾಗ ಹೊಡೆಯುವ ಮಂಜಿನ ಮಂಗನಾಟಕ್ಕೆ... ಕಣಿವೆಗಳ ನಡುವಿನ ಹಾವು ಸರಿದಂತಿರುವ ರಸ್ತೆಯಲ್ಲಿ ಸಾಗಿಬರುವ ವಾಹನಗಳ ಮಂದ ದೀಪಗಳ ಹೊಸ ಅನುಭವಕ್ಕೆ ರಾಜಾಸೀಟು ಸಾಕ್ಷಿಯಾಗುತ್ತದೆ.

WD
ಮಸಣದ ಮೇಲೆ ಉದ್ಯಾನ: ಹಾಗೆನೋಡಿದರೆ ಇವತ್ತು ಸುಂದರ ಉದ್ಯಾನವನವಾಗಿ ಕಂಗೊಳಿಸುವ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟಿಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟಿಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ದಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.

ಈ ಉದ್ಯಾನಕ್ಕೆ ರಾಜಾಸೀಟ್ ಎಂಬ ಹೆಸರು ಹೇಗೆ ಬಂತೆಂಬುವುದರ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿದರೆ ಒಂದಷ್ಟು ಮಾಹಿತಿ ದೊರೆಯುತ್ತದೆ. ಹಿಂದೆ ಚಿಕ್ಕವೀರರಾಜನ ಕಾಲದಲ್ಲಿ ರಾಜ ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದಂತೆ. ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು.

ಬ್ರಿಟಿಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದೆ.

WD
ಕೊಡಗಿನ ಏಕೈಕ ರೈಲು: ತೋಟಗಾರಿಕಾ ಇಲಾಖೆಯ ಅಧೀನದಲ್ಲಿರುವ ರಾಜಾಸೀಟ್ನಲ್ಲಿ ಕಾರಂಜಿ, ಕೃತಕ ಜಲಪಾತಗಳನ್ನು ಕೂಡ ನಿರ್ಮಿಸಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ರಾಜಾಸೀಟಿನ ಬಳಿಯಲ್ಲಿಯೇ ಪುಟಾಣಿ ರೈಲು ಕೂಡ ಇದೆ. ರೈಲು ಸಂಪರ್ಕವನ್ನೇ ಕಾಣದ ಕೊಡಗಿಗೆ ಇದೇ ಏಕೈಕ ರೈಲು. ಈ ರೈಲನ್ನು ನೋಡಿ ಇಲ್ಲಿನ ಮಕ್ಕಳು ರೈಲಿನ ಕಲ್ಪನೆ ಮಾಡಿಕೊಳ್ಳುತ್ತಾರೆ. ಕಾವೇರಿ ಪಟ್ಟಣದಿಂದ ಹೊರಡುವ ರೈಲು ಬ್ರಹ್ಮಗಿರಿ ಕಣಿವೆಗಾಗಿ ಸಾಗುತ್ತದೆ. ಈ ರೈಲು ಕೊಡಗಿಗೆ ಬಂದು ಎರಡು ದಶಕಗಳು ಕಳೆದಿವೆ. ಮೊದಲಿಗೆ ಗಾಲ್ಫ್‌ ಗ್ರೌಂಡ್‌ ಬಳಿ ಸ್ಥಾಪನೆ ಮಾಡಲಾಗಿತ್ತಾದರೂ ಮಡಿಕೇರಿ ಪಟ್ಟಣದಿಂದ ಹೊರವಲಯದಲ್ಲಿದ್ದುದರಿಂದ ಅಲ್ಲಿಗೆ ಜನರು ತೆರಳದ ಕಾರಣ ರಾಜಾಸೀಟ್ ಬಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಇಲ್ಲಿಯ ತನಕ ಇದು ರಾಜಾಸೀಟ್‌ನ ಪ್ರಮುಖ ಆಕರ್ಷಣೆಯಾಗಿದೆ. ಇದರ ಉಸ್ತುವಾರಿಯನ್ನು ನಗರಸಭೆಯೇ ನೋಡಿಕೊಳ್ಳುತ್ತಿದೆ.

ರಾಜಾಸೀಟ್ ಉದ್ಯಾನದ ಒಂದು ಭಾಗದಲ್ಲಿ ಶಕ್ತಿದೇವತೆ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮನ ದೇಗುಲವಿದೆ. ದೇವಾಲಯವನ್ನು ದಾಟಿ ಮುನ್ನಡೆದರೆ ಆಕಾಶವಾಣಿ ಕೇಂದ್ರ, ನೆಹರು ಮಂಟಪವಿದೆ.

ನಿಸರ್ಗ ರಮಣೀಯತೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡು ಪ್ರವಾಸಿಗರನ್ನು ಸೆಳೆಯುತ್ತಿರುವ ರಾಜಾಸೀಟ್ ಇತರೆಡೆಗಳಲ್ಲಿರುವ ಉದ್ಯಾನಗಳಿಗೆ ಹೋಲಿಸಿದರೆ ಹೆಚ್ಚಿನ ಅಭಿವೃದ್ದಿಯಾಗಿಲ್ಲ. ಇನ್ನಷ್ಟು ಸೌಲಭ್ಯಗಳನ್ನು ಇಲ್ಲಿ ಕಲ್ಪಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಇತ್ತ ಸೆಳೆಯುವಂತೆ ಮಾಡುವ ಅಗತ್ಯವಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments