ವಿಶ್ವದ ಮೂಲೆ ಮೂಲೆಯಲ್ಲೂ ಈ ನಿಸರ್ಗಸ ಸೋಜಿಗ ಇದ್ದೇ ಇರುತ್ತದೆ. ಅದನ್ನು ನೋಡಿ ನಾವು ಆಹ್! ಓಹ್ ಎಂದು ಉದ್ಗರಿಸುವುದು ನಡೆದೇ ನಡೆಯುತ್ತದೆ. ಇಂತಹ ಒಂದು ನೈಸರ್ಗಿಕ ನೋಟ ಕಾಣಸಿಗುವುದು ಬೆಳ್ತಂಗಡಿ ಗ್ರಾಮದ ಚಾರ್ಮಾಡಿ ಎಂಬ ನಿತ್ಯ ನಿರಂತರ ರಮಣೀಯತೆಯ ಸುಂದರ ಸ್ಥಳದಲ್ಲಿ. ಈ ಮಾರ್ಗವಾಗಿ ಜನಸಾಮಾನ್ಯ ನೂರೆಂಟು ಬಾರಿ ಪ್ರಯಾಣಿಸಿದ್ದರೂ ಅವನಿಗೆ ಈ ಜೀವಂತಿಕೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಇರಲಾರದು.
ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಚಾರ್ಮಾಡಿ ಎಂಬ ಪುಟ್ಟ ಊರು ತನ್ನ ಅನೂಹ್ಯ ವಿಸ್ಮಯಕ್ಕೆ ಹೆಸರಾಗಿದೆ. ಹೌದು ಪ್ರಕೃತಿ ಮಾತೆ ಹಸಿರು ಸೀರೆಯನ್ನುಟ್ಟು ವಿರಾಜಮಾನಳಾಗಿದ್ದಾಳೋ ಎಂಬಂತೆ ಭಾಸವಾಗುವ ಈ ಸ್ಥಳದಲ್ಲಿ ಮಂಜಿನಿಂದ ಆವೃತವಾದ ಬೆಟ್ಟಗುಡ್ಡಗಳು ನಿಧಾನವಾಗಿ ಬಿಸಿಲೇರಿದಂತೆ ಕಾಣಸಿಗುವ ನೋಟವನ್ನು ನಮಗೆ ಉಣಬಡಿಸುತ್ತದೆ.
ಧರ್ಮಸ್ಥಳದಿಂದ ಅಂದಾಜು 20 ಕಿಮೀ. ಪ್ರಯಾಣಿಸಿದರೆ ಚಾರ್ಮಾಡಿ ಸಿಗುತ್ತದೆ (ಧರ್ಮಸ್ಥಳದಿಂದ ಚಾರ್ಮಾಡಿಗೆ ವಾಹನ ವ್ಯವಸ್ಥೆ ಇದೆ) ಕೊಟ್ಟಿಗೆ ಹಾರ ಚಾರ್ಮಾಡಿಗೆ ಸಮೀಪವಿರುವ ಊರು. ತಿರುವು ಮುರುವು ರಸ್ತೆಯ ಇಕ್ಕೆಲದಲ್ಲೂ ನಯನ ಮನೋಹರ ನೋಟವು ಕಾಣಸಿಗುತ್ತದೆ. ಹಿಮದಿಂದ ಆವೃತವಾಗಿದ್ದರೂ ಗಿರಿಶಿಖರಗಳು ಸ್ವಲ್ಪ ಸಮಯದಲ್ಲಿ ನಿಚ್ಚಳವಾಗಿ ಕಾಣಸಿಗುತ್ತದೆ ಅದೂ ಅಲ್ಲದೆ ಚಾರಣ ಪ್ರಿಯರಿಗೆ ಇಲ್ಲಿ ಜೇನುಕಲ್ಲು ಗುಡ್ಡ, ಕೊಡೆಕಲ್ಲುಗುಡ್ಡವೂ ಇದೆ.
ನಗರ ಪಟ್ಟಣದಿಂದ ತುಂಬಾ ದೂರವಾಗಿರುವ ಚಾರ್ಮಾಡಿಯ ಹಸಿರ ಸಮೃದ್ದಿಗೆ ಮಾತ್ರ ಹೆಸರುವಾಸಿಯಾಗಿರದೆ ಇಲ್ಲಿ ಭೋರ್ಗರೆಯುವ ಸಣ್ಣ, ದೊಡ್ಡ ಜಲಪಾತಗಳು ಅಷ್ಟೇ ಆಕರ್ಷಕ. ಈ ಜಲಪಾತಗಳಲ್ಲಿ ನೀರು ಆರುವುದೇ ಇಲ್ಲ. ಮಳೆಗಾಲಕ್ಕಿಂತಲೂ ಬೇಸಿಗೆಯಲ್ಲಿ ನೀರಿನ ಮಟ್ಟ ಸ್ವಲ್ಪ ಕಡಿಮೆಯಿದ್ದರೂ ನೀರಿನಲ್ಲಿರುವ ಸತ್ವ, ಆಕರ್ಷಣೆ ಹಾಗೆಯೇ ಇರುತ್ತದೆ. ಆದರೂ ಈ ಪರಿಸರ ಈಗೀಗ ಚಾರಣ ಪ್ರಿಯರಿಂದ ಮಲಿನಗೊಳ್ಳುತ್ತಿದೆ ಜನಸಂಚಾರವಿಲ್ಲದ ಈ ಪರಿಸರದಲ್ಲಿ ಅಪಾಯ ಕೂಡ ಕಟ್ಟಿಟ್ಟ ಬುತ್ತಿ. ಇಂತಹ ಒಂದು ಪ್ರಕೃತಿದತ್ತ ನೋಟವನ್ನು ಹಾಗೆಯೇ ಉಳಿಸಿಕೊಳ್ಳಬೇಕೆನ್ನುವ ಇರಾದೆ ಸರಕಾರಕ್ಕಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ. ಆದರೂ ಪ್ರವಾಸಿಗರ ಬತ್ತದ ಇಚ್ಛೆ, ಹಾಗೂ ಆಸುಪಾಸಿನವರ ಕಾಳಜಿಯಿಂದ ಆಧುನೀಕರಣದ ಗಾಳಿ ಇಲ್ಲಿಗ್ಗಿನ್ನೂ ಸೋಕಿಲ್ಲ ಅನ್ನಬಹುದು. ನಿಮ್ಮ ಮುಂದಿನ ಪ್ರವಾಸಕ್ಕೆ ಯಾವ ಸ್ಥಳವನ್ನು ಆರಿಸಬೇಕೆಂಬ ಗೊಂದಲದಲ್ಲಿದ್ದರೆ ಧೈರ್ಯವಾಗಿ ಚಾರ್ಮಾಡಿಯನ್ನು ಆಯ್ಕೆ ಮಾಡಿಕೊಳ್ಳಿ....