ಅವತ್ತು ತಂದೆ ನಿರ್ಮಿಸಿದ ಪುಷ್ಪೋದ್ಯಾನ ಇಂದು ಮಗ ಎಫ್.ಎಂ.ಖಾನ್ ಅವರು ಹೊಸ ರೂಪ ನೀಡಿ ಮುಂದುವರೆಸಿಕೊಂಡು ಬಂದಿದ್ದಾರೆ. ನಾವು ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಒಳಗೆ ಕಾಲಿಟ್ಟಿದ್ದೇ ಆದರೆ ನಮಗೊಂದು ವಿಶಿಷ್ಟ ಅನುಭವವಾಗುತ್ತದೆ. ಏಕೆಂದರೆ ಇದೊಂದು ಸಾಧಾರಣ ಉದ್ಯಾನವನವಾಗಿರದೆ ರಾಷ್ಟ್ತ್ರೀಯ, ಅಂತರರಾಷ್ಟ್ತ್ರೀಯ ಖ್ಯಾತಿಯ ವಿಶಿಷ್ಟ ಜಾತಿಯ ಪುಷ್ಪಗಿಡಗಳು ಈ ಉದ್ಯಾನವನದಲ್ಲಿ ಸ್ಥಾನಪಡೆದಿವೆ. ಇಲ್ಲಿ ವಿವಿಧ ಬಗೆಯ ಪುಷ್ಪಗಿಡಗಳು ಅರಳಿ ಕಂಗೊಳಿಸುವುದನ್ನು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ.
ಕಣ್ಣು ಹಾಯಿಸಿದುದ್ದಕ್ಕೂ ಕಣ್ಸೆಳೆಯುವ ಬೇಲಿಗಿಡಗಳು, ಮೇಲೆ ಚಪ್ಪರದಲ್ಲಿ, ಕೆಳಗೆ ನೆಲದಲ್ಲಿ ಅರಳಿ ಕಂಗೊಳಿಸುವ ವಿವಿಧ ಬಗೆಯ ಪುಷ್ಪಗಿಡಗಳು, ಹಲವು ದಶಕಗಳನ್ನು ಸವೆಸಿದ ಕುಬ್ಜ ಬೋನ್ಸಾಯ್ಗಳು, ಮುಳ್ಳಿನ ಹೊದಿಕೆಯ ಕ್ಯಾಕ್ಟಸ್ಗಳು, ಮರಗಳಲ್ಲಿ, ಕುಂಡಗಳಲ್ಲಿ ನೇತಾಡುವ ಆರ್ಕಿಡಾಗಳು, ವಿವಿಧ ನಮೂನೆಯ ಎಲೆಗಿಡಗಳು, ಮನತಣಿಸುವ ಗುಲಾಬಿ, ಆಂಥೋರಿಯಂ ಹೀಗೆ ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟು ಹಲವು ವೈಶಿಷ್ಟ್ಯತೆಯಿಂದ ಕೂಡಿದ ರಾಷ್ಟ್ತ್ರೀಯ, ಅಂತರರಾಷ್ಟ್ತ್ರೀಯ ಉದ್ಯಾನವನಗಳಲ್ಲಷ್ಟೇ ಕಾಣಬಹುದಾದಂತಹ ಪುಷ್ಪಗಳು ಇಲ್ಲಿ ಅರಳಿ ನಮ್ಮನ್ನು ವಿಸ್ಮಯಗೊಳಿಸುತ್ತವೆ.
ಗಮನಸೆಳೆಯುವ ಕ್ಯಾಕ್ಟಸ್: ಪುಷ್ಪೋದ್ಯಾನದಲ್ಲಿ ಅದೆಷ್ಟು ಹೂಗಿಡಗಳು ಕಂಗೊಳಿಸುತ್ತವೆಯೆಂದರೆ, ಬಹುವಾರ್ಷಿಕ ಪುಷ್ಪಗಿಡಗಳಿಗೆ ಸೇರುವ ಪಿಂಕ್ಸ್, ಪ್ಲೌಕ್ಸ್, ಜೀನಿಯ, ಸಾಲ್ವಿಯಾ, ಜರ್ಬೆರಾ, ಪಿಟೋನಿಯಾ, ಕರ್ಣಕುಂಡಲ, ಕಾರ್ನೇಸನ್, ಜಿರಾನಿಯಂ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವುಗಳ ಜೊತೆಗೆ ಚಂದದ ಅಲೋಕೇಶಿಯಾ, ಫರ್ನ್, ಫಾಮ್ಸ್, ಕ್ಯಾಕ್ಟಸ್, ಸೆಕ್ಯುಲೆಂಟ್ಸ್, ಡ್ರಸೀನ, ಮರಾಂಟ ಮುಂತಾದ ಎಲೆಗಿಡಗಳೂ ಇಲ್ಲಿ ಕಾಣಸಿಗುತ್ತವೆ.
ಈ ಪುಷ್ಪೌದ್ಯಾನವನದಲ್ಲಿ ಕಾಣುವ ಪ್ರಮುಖ ವೈಶಿಷ್ಟ್ಯವೆಂದರೆ, ಸುಮಾರು 50 ವರ್ಷಕ್ಕೂ ವಯಸ್ಸಾದ ಕ್ಯಾಕ್ಟಸ್. ಇದು ಸುಮಾರು 20 ಅಡಿಗಿಂತಲೂ ಹೆಚ್ಚು ಎತ್ತರವಿದ್ದು, ದೊಡ್ಡ ಗಾತ್ರವನ್ನು ಹೊಂದಿದೆ. ಈ ಗಿಡದ ಸುತ್ತಲೂ ವಿವಿಧ ಜಾತಿಯ ಹೂಗಿಡಗಳನ್ನು ನೆಡಲಾಗಿದ್ದು ಅರಳಿ ಕಂಗೊಳಿಸುತ್ತವೆ. ಭವ್ಯ ಮನೆಯ ಜಗುಲಿ, ಮೆಟ್ಟಿಲುಗಳಲ್ಲಿ ಹೂಕುಂಡವನ್ನಿರಿಸಲಾಗಿದ್ದು, ಈ ಹೂಕುಂಡಗಳಲ್ಲಿ ಬಗೆಬಗೆಯ ಪುಷ್ಪಗಿಡಗಳು, ಎಲೆಗಿಡಗಳನ್ನು ನೆಡಲಾಗಿದೆ. ಮರದಲ್ಲಿ ನೇತಾಡುವ ಡಬ್ಬಗಳಲ್ಲಿ ಹಲವು ಬಗೆಯ ಹೂಗಳು ಅರಳಿ ಕಂಗೊಳಿಸುತ್ತವೆ.