ಮುಖ್ಯಮಂತ್ರಿ ಬೆಂಬಲಿತ ಕೆಲ ಕಾಂಗ್ರೆಸ್ ನಾಯಕರು ಕರ್ತವ್ಯ ನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುತ್ತಿರುವುದರಿಂದ ಬೇಸತ್ತು ಮಾನಸಿಕ ಖಿನ್ನತೆಗೊಳಗಾದ ಕೂಡ್ಗಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಅಂಬೇಡ್ಕರ್ ಭವನಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿದ್ದ ಮದ್ಯದಂಗಡಿಯನ್ನು ತೆರುವುಗೊಳಿಸುವ ಬಗ್ಗೆ ಶೆಣೈ ತೆಗೆದುಕೊಂಡ ಕಾನೂನು ಕ್ರಮಗಳನ್ನು ಪ್ರತಿಭಟಿಸಿ, ನೂರಾರು ಸಂಖ್ಯೆಯಲ್ಲಿದ್ದ ಜನರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಘೋಷಣೆಗಳನ್ನು ಕೂಗಿದ್ದರು.
ಪೊಲೀಸ್ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಕೂಡಾ ತಮ್ಮ ಬೆಂಬಲಕ್ಕೆ ಬಾರದಿದ್ದರಿಂದ ಬೇಸತ್ತ ಅನುಪಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣಿಕ ಅಧಿಕಾರಿಯಾಗಿದ್ದ ಶೆಣೈ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಂತರವಾದರೂ ಸಿದ್ದರಾಮಯ್ಯ, ಅವರನ್ನು ಕರೆಸಿ ಸಮಸ್ಯೆಗೆ ಪರಿಹಾರ ಹಾಡುವ ಬದಲು ಮೌನವಾಗಿರುವುದು ನೋಡಿದಲ್ಲಿ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್, ಕೆಲ ತಿಂಗಳುಗಳ ಹಿಂದೆ ಅನುಪಮಾ ಅವರನ್ನು 24 ಗಂಟೆಗಳಲ್ಲಿ ವರ್ಗ ಮಾಡಿಸುವುದಾಗಿ ಬೆದರಿಕೆಯೊಡ್ಡಿರುವ ಘಟನೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್, ಸಚಿವ ಪರಮೇಶ್ವರ್ ನಾಯ್ಕ ವಿರುದ್ಧ ಕ್ರಮ ಕೈಗೊಳ್ಳುವ ಬದಲಿಗೆ ಶೆಣೈ ಅವರನ್ನೇ ವರ್ಗಾಯಿಸಿ ಕೈ ತೊಳೆದುಕೊಂಡಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.