ಕಲಬುರ್ಗಿ : 'ಹೈದರಾಬಾದ್ ಕರ್ನಾಟಕದ ವಿಮೋಚನೆಗೆ ಕಾರಣರಾದ ಸರ್ದಾರ್ ವಲ್ಲಭಭಾಯಿ ಪಟೇಲರು ಪ್ರಥಮ ಉಕ್ಕಿನ ಮನುಷ್ಯರಾದರೆ, ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಬಿ.ಎಸ್. ಯಡಿಯೂರಪ್ಪ ಇನ್ನೊಬ್ಬ ಉಕ್ಕಿನ ಮನುಷ್ಯ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
Photo Courtesy: Google
ಶುಕ್ರವಾರ ಇಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
'ಯಡಿಯೂರಪ್ಪ ಅವರು ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದಾರೆ. ಹಲವಾರು ಕಾರ್ಯಕ್ರಮಗಳಿಗೂ ಅವರು ರೂವಾರಿಗಳಾಗಿದ್ದಾರೆ. ಅವರ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ. ಜನರ ಜೀವನ ಮಟ್ಟ ಸುಧಾರಿಸುವ ಮೂಲಕ ಕಲ್ಯಾಣ ಕರ್ನಾಟಕ ಹೆಸರಿಗೆ ಸಾರ್ಥಕತೆ ತುಂಬುವ ಛಲದಿಂದ ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನಮ್ಮ ಈ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸಬೇಕು' ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತವನ್ನು ರಿಪಬ್ಲಿಕ್ ದೇಶವನ್ನಾಗಿ ಮಾಡಿದ ಪ್ರಥಮ ನಾಯಕರು. ಅವರು ನಮಗೆಲ್ಲ ಆದರ್ಶರು. ಅವರು ತೋರಿಸಿರುವ ತತ್ವ- ಆದರ್ಶಗಳ ಅಡಿಯಲ್ಲಿ ಸ್ವತಂತ್ರ ಭಾರತವನ್ನು ನಾವು ಮುನ್ನಡೆ ಮಾಡುತ್ತಿದ್ದೇವೆ' ಎಂದರು. 'ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕತ್ವ ನಮ್ಮ ದೇಶಕ್ಕೆ ಸಿಕ್ಕಿದೆ. ಇಂದು ಅವರ ಜನ್ಮದಿನವೂ ಹೌದು. ನವ ಕರ್ನಾಟಕ ಮತ್ತು ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸೋಣ' ಎಂದರು.