Select Your Language

Notifications

webdunia
webdunia
webdunia
webdunia

ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆಗೆ ಶರಣು

ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆಗೆ ಶರಣು
ರಾಮನಗರ , ಶನಿವಾರ, 3 ಅಕ್ಟೋಬರ್ 2015 (13:33 IST)
ಸಾಲಬಾಧೆ ತಾಳಲಾರದೆ ಜಿಲ್ಲೆಯ ಮೂಲದ ದಂಪತಿಗಳಿಬ್ಬರು ಪ್ರತ್ಯೇಕ ಸ್ಥಳಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ. 
 
ಆತ್ಮಹತ್ಯೆ ಮಾಡಿಕೊಂಡ ದಂಪತಿಗಳನ್ನು ಮಂಗಳಮ್ಮ(32) ಮತ್ತು ಬಸವಲಿಂಗಯ್ಯ(38) ಎಂದು ಹೇಳಲಾಗಿದ್ದು, ಇವರು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಾಣತಹಳ್ಳಿ ಗ್ರಾಮದ ಮೂಲದವರು ಎಂದು ತಿಳಿದು ಬಂದಿದೆ. 
 
ಪ್ರಕರಣದ ಹಿನ್ನೆಲೆ: ಬಸವಲಿಂಗಯ್ಯ ಬ್ಯಾಂಕ್ ಸೇರಿದಂತೆ ರೈತರ ಬಳಿಯೂ ಕೂಡ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಈ ನಡುವೆ ಜಮೀನನ್ನು ಗುತ್ತಿಗೆ ಪಡೆದು ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಆದರೆ ಬೆಳೆಯಿಂದ ಬರುವ ಆದಾಯದಿಂದ ಸಾಲ ತೀರಿಸಲು ಅಸಾಧ್ಯ ಎಂದು ತೀರ್ಮಾನಿಸಿದ ದಂಪತಿ, ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರು ನಗರಕ್ಕೆ ಗುಳೆ ಬಂದು ಬೇಕರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಸಾಲಗಾರರೂ ಕೂಡ ಹಣ ಮರುಪಾವತಿಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಹೀಗಿದ್ದಾಗ ಕಳೆದ ಮೂರು ದಿನಗಳ ಹಿಂದೆ ಮೃತೆ ಮಂಗಳಮ್ಮ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ತನ್ನ ಮಾವ ಹಾಗೂ ಬಾಮೈದನರೊಂದಿಗೆ ಸಾಲ ತೀರಿಸುವ ಬಗ್ಗೆ ಮಾತುಕತೆ ನಡೆಸಿದ್ದಾಳೆ. ಬಳಿಕ ಮನನೊಂದ ಮಹಿಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಿತ್ತನೆ ಬೀಜಗಳನ್ನು ಹುಳುಗಳಿಂದ ರಕ್ಷಿಸಲು ಬಳಸುವ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಸ್ಥಳೀಯರು ಘಟನೆಯನ್ನು ಕಂಡ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ ಮಹಿಳೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಈ ವಿಷಯವನ್ನು ಗ್ರಾಮಸ್ಥರು ಪತಿ ಬಸವಲಿಂಗಯ್ಯ ಅವರಿಗೆ ತಿಳಿಸಿದ್ದಾರೆ. ಇದರಿಂದ ಮನನೊಂದ ಪತಿ ಕೂಡ ತಾನು ಬೆಂಗಳೂರಿನ ಹೊಂಗಸಂದ್ರದಲ್ಲಿ ಬಾಡಿಗೆ ಇದ್ದ ಮನೆಯಲ್ಲಿಯೇ ನೇಣಿಗೆ ಶರಣಾಗುವ ಮೂಲಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರಿಗೆ ಇಬ್ಬರು ಪಟ್ಟ ಗಂಡು ಮಕ್ಕಳಿದ್ದಾರೆ.  
 
ಸಾಲದ ವಿಚಾರದಲ್ಲಿ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗಿದ್ದು, ಸಾಲಬಾಧೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ತಹಶಿಲ್ದಾರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada