Select Your Language

Notifications

webdunia
webdunia
webdunia
webdunia

ಯಡ್ಡಿಯೊಂದಿಗೆ ಕೈ ಜೋಡಿಸಿ ಮತ್ತೆ ಪಕ್ಷ ಅಧಿಕಾರಕ್ಕೆ ತರುತ್ತೇವೆ: ಅನಂತಕುಮಾರ್‌

ಯಡ್ಡಿಯೊಂದಿಗೆ ಕೈ ಜೋಡಿಸಿ ಮತ್ತೆ ಪಕ್ಷ ಅಧಿಕಾರಕ್ಕೆ ತರುತ್ತೇವೆ:  ಅನಂತಕುಮಾರ್‌
ಬೆಂಗಳೂರು , ಮಂಗಳವಾರ, 2 ಸೆಪ್ಟಂಬರ್ 2014 (14:07 IST)
'ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆಯನ್ನು ನಾನು ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಹಿಸಿಕೊಳ್ಳುತ್ತೇವೆ' ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಘೋಷಿಸಿದ್ದಾರೆ. 
 
ಪಕ್ಷ ಕಟ್ಟಿ ಬೆಳೆಸುವಲ್ಲಿ ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾ ದುದು. ಹಿಂದಿನ ಕಹಿ ಘಟನೆಗಳನ್ನು ಮರೆತು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇವೆ ಎಂದೂ ಅವರು ಹೇಳಿದ್ದಾರೆ. 
 
ಸೋಮವಾರ ಬಿಜೆಪಿಯ ಬೆಂಗಳೂರು ಮಹಾನಗರ ಮತ್ತು ನಗರ ಜಿಲ್ಲಾ ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆಗೆ 40 ವರ್ಷಗಳ ಹಿಂದೆ ಇಬ್ಬರೂ ಸೇರಿ ಹೋರಾಟ ನಡೆಸಿದ್ದೇವೆ. ಮಧ್ಯದಲ್ಲಿ ಹಲವು ಕಹಿ ಘಟನೆಗಳು ನಡೆದಿರಬಹುದು. ಈಗ ಅದನ್ನೆಲ್ಲ ಮರೆತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇವೆ ಎಂದರು. 
 
ಬಿಬಿಎಂಪಿ ವಶಕ್ಕೆ ತೆಗೆದುಕೊಳ್ಳಿ: ಬಿಜೆಪಿಯ ನೂತನ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದ ಯಡಿಯೂರಪ್ಪ ಮಾತನಾಡಿ, ಈಗ ಆಯ್ಕೆಯಾಗುವ ಮೇಯರ್‌ ಮುಂದಿನ 7 ತಿಂಗಳ ಕಾಲ ಉತ್ತಮ ಕಾರ್ಯನಿರ್ವಹಿಸಿ ಮತ್ತೆ ಬಿಬಿಎಂಪಿ ಆಡಳಿತವನ್ನು ಬಿಜೆಪಿ ತೆಕ್ಕೆಗೆ ವಶಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 
 
ಕೇಂದ್ರ ಸರ್ಕಾರವು ಜನರ ಆಶೋತ್ತರಗಳಿಗನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೂರು ಬಾರಿ ಪೆಟ್ರೋಲ್‌ ಬೆಲೆ ಇಳಿಕೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಸಹ ಕಡಿಮೆಯಾಗಲಿವೆ. ಮುಂದಿನ ಆರು ತಿಂಗಳಲ್ಲಿ ದೇಶದಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ ಎಂಬುದನ್ನು ಗಮನಿಸುತ್ತೀರಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ, ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಆರ್‌.ಅಶೋಕ್‌, ಮೇಯರ್‌ ಕಟ್ಟೆ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು. 

Share this Story:

Follow Webdunia kannada