ಬೆಂಗಳೂರು : ಅತ್ಯಾಚಾರ ಸಂತ್ರಸ್ತೆಗೆ ನಿಯಮಬಾಹಿರವಾಗಿ ಗರ್ಭಪಾತ ಮಾಡಿಸಿರುವುದಕ್ಕೆ ಯಲಹಂಕ ಸರಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ರಾಜ್ಯ ಮಹಿಳಾ ಹಕ್ಕು ಆಯೋಗ ಗೃಹ ಇಲಾಖೆಗೆ ದೂರು ನೀಡಿದೆ.
ಐದು ತಿಂಗಳ ಗರ್ಭವತಿಯಾಗಿದ್ದ 15 ವರ್ಷದ ಬಾಲಕಿಗೆ ಡಿ.2ರಂದು ಯಲಹಂಕ ಸರಕಾರಿ ವೈದ್ಯರಾದ ಡಾ.ರಾಮಚಂದ್ರ ಅವರು ಗರ್ಭಪಾತ ಮಾಡಿಸಿದ್ದರು. ಈ ವೇಳೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಯನ್ನೂ ಇನ್ನೂ ಬಂಧಿಸಿರಲಿಲ್ಲ. ಹೀಗಾಗಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಬೇಕಾಗಿತ್ತು. ಆದರೆ, ವೈದ್ಯರು ಎಲ್ಲ ನಿಯಮಗಳನ್ನು ಮೀರಿ ಆಕೆಗೆ ಗರ್ಭಪಾತ ಮಾಡಿಸಿದ್ದಾರೆ. ಹೀಗಾಗಿ ವೈದ್ಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ನಗರ ಪೊಲೀಸ್ ಕಮಿಷನರ್ ಹಾಗೂ ಗೃಹ ಇಲಾಖೆಗೆ ದೂರು ನೀಡಿದ್ದಾರೆ.
ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವವರಿಂದ ವೈದ್ಯ ಡಾ. ರಾಮಚಂದ್ರ ಅವರು 15ರಿಂದ 20 ಸಾವಿರ ರೂ. ಪಡೆಯುತ್ತಾರೆ ಎಂದು ಆರೋಪಿಸಿ ಆಸ್ಪತ್ರೆ ಎದುರು ಇತ್ತೀಚೆಗೆ ಪ್ರತಿಭಟನೆ ನಡೆದಿತ್ತು. ಈ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಲು ಮಹಿಳಾ ಆಯೋಗದ ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.