ಟೋಯಿಂಗ್ ನಿಯಮಗಳನ್ನು ಪಾಲಿಸದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೋಯಿಂಗ್ ಸಿಬ್ಬಂದಿ ವರ್ತನೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ, ಅಸಮಾಧಾನ ವ್ಯಕ್ತವಾಗಿದೆ.
ಯಾವ ಸ್ಥಳಗಳಲ್ಲಿ ಘಟನೆ ನಡೆದಿದೆಯೋ ಆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೊನ್ನೆ ನಡೆದ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಎಲ್ಲೆಲ್ಲಿ ದುವರ್ತನೆ ತೋರಿದ್ದಾರೊ ಅದರ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಎಎಸ್‍ಐ ನಾರಾಯಣ್ ವಿರುದ್ಧ ಸದ್ಯ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಇಂದು ಸಿಎಂ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದ್ದು, ಯಾವ ಯಾವ ತೀರ್ಮಾನ ಆಗುತ್ತದೆಯೋ ಅದನ್ನು ಯಥಾವತ್ತಾಗಿ ಪಾಲಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಟೋಯಿಂಗ್ ವಾಹನಗಳನ್ನು ಖಾಸಗಿಗೆ ನೀಡಿರುವ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಳೆದ ಐದು ವರ್ಷಗಳಿಂದ ಇದು ಜಾರಿಯಲ್ಲಿದೆ. 40 ಪೊಲೀಸ್ ಠಾಣೆಗಳ ಸಿಬ್ಬಂದಿ ವಾಹನಗಳನ್ನು ನಿರ್ವಹಣೆ ಮಾಡುವುದು ಅಸಾಧ್ಯ.
ವಾಹನಗಳ ಖರೀದಿ ವಿಚಾರ ಸೇರಿದಂತೆ ಕೆಲವು ಅಡೆತಡೆಗಳಿವೆ. ಎಲ್ಲವನ್ನು ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.