ಸರ್ಕಾರದ ಅವಧಿ ಕೆಲವೇ ದಿನಗಳಿರುವುದರಿಂದ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಾಗಿ ಟೆಂಡರ್ ಕರೆಯುತ್ತಿದೆ. 500 ಕೋಟಿ ರೂಪಾಯಿ ಟೆಂಡರನ್ನು 1000 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್ನಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ಟೆಂಡರ್ ಗೋಲ್ಮಾಲ್ ಹೇಗೆ ನಡೆಯುತ್ತಿದೆ ಎಂಬ ವಿವರ ನೀಡಿದ್ದಾರೆ. ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತದೆ. ಬಜೆಟ್ ಸೆಷನ್ ಮುಗಿದ ಮೇಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಜಲಸಂಪನ್ಮೂಲ, ಇಂಧನ, ಆರೋಗ್ಯ ಸೇರಿ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಎರಡು ಪಟ್ಟು ಹೆಚ್ಚು ಮೊತ್ತಕ್ಕೆ ಎಸ್ಟಿಮೇಟ್ ಮಾಡುತ್ತಿದ್ದಾರೆ. ಏಳು ದಿನ ಮಾತ್ರ ಟೈಂ ಕೊಟ್ಟು, ಗುತ್ತಿಗೆದಾರರನ್ನು ಸೆಟ್ ಮಾಡಲು ಶಾಸಕರಿಗೆ ಹಂಚಿಬಿಟ್ಟಿದ್ದಾರೆ. ಬೀದಿಯಲ್ಲಿ ನಿಂತು ಅವರು ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.