ಬೆಂಗಳೂರು :ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ವಯೋವೃದ್ಧ ರೈತರೊಬ್ಬರು ತಮ್ಮ ಮೂಟೆಯ ಸಹಿತ ಮೆಟ್ರೋ ಹತ್ತಲು ಬಂದಿದ್ದರು. ಆದರೆ ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಕೊಳಕು ಬಟ್ಟೆ ಧರಿಸಿದ್ದಾರೆಂದು ಕ್ಯಾತೆ ತೆಗೆದು ಒಳಬಿಡಲು ನಿರಾಕರಿಸಿದ್ದರು. ಇದನ್ನು ಸ್ಥಳದಲ್ಲಿದ್ದ ಪ್ರಯಾಣಿಕರು ಮೊಬೈಲ್ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದರು.
ಮಲಿನ ಬಟ್ಟೆಗಳನ್ನು ಧರಿಸಿದ್ದಾರೆಂಬ ಕಾರಣಕ್ಕೆ ವಯೋವೃದ್ಧ ರೈತರೊಬ್ಬರನ್ನು ಮೆಟ್ರೋ ರೈಲಿನಲ್ಲಿ ಪ್ರವೇಶಿಸಲು ಅವಕಾಶ ನಿರಾಕರಿಸಿರುವ ಘಟನೆ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ನಡೆದಿದೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಡಿಯೋ ಬಯಲಾಗಿದ್ದು, ಮೆಟ್ರೋ ವರ್ತನೆಗೆ ಸಾರ್ವಜನಿರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸ್ಥಳದಲ್ಲಿಯೇ ಇದ್ದ ಕಾರ್ತಿಕ್ ಸಿ ಐರಾನಿ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಜೊತೆಯೇ ವೃದ್ಧನನ್ನು ಒಳಗೆ ಕರೆದೊಯ್ದಿದ್ದಾರೆ. ಅವರೊಂದಿಗೂ ಸಹ ಮೆಟ್ರೋ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು ಮೆಟ್ರೋ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.