ಜಿಎಸ್‌ಟಿ ಮಂಡಳಿಯು ತನ್ನ ಮುಂದಿನ ಸಭೆಯಲ್ಲಿ ಕಡಿಮೆ ಹಂತದ ತೆರಿಗೆ ದರವನ್ನು ಈಗಿರುವ ಶೇ 5ರಿಂದ ಶೇ 8ಕ್ಕೆ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ವರಮಾನ ಸಂಗ್ರಹ ಹೆಚ್ಚಿಸಲು ಇರುವ ಮಾರ್ಗಗಳ ಕುರಿತಾಗಿ ರಾಜ್ಯ ಹಣಕಾಸು ಸಚಿವರ ಸಮಿತಿಯು ವರದಿ ಸಿದ್ಧಪಡಿಸಿದ್ದು, ಈ ತಿಂಗಳ ಅಂತ್ಯದ ಒಳಗಾಗಿ ಜಿಎಸ್‌ಟಿ ಮಂಡಳಿಗೆ ಅದನ್ನು ಸಲ್ಲಿಸುವ ನಿರೀಕ್ಷೆ ಇದೆ.
ಜಿಎಸ್‌ಟಿ ಮಂಡಳಿಯು ಇದೇ ತಿಂಗಳು ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಸಭೆ ಸೇರಬಹುದು ಎಂದು ಮೂಲಗಳು ತಿಳಿಸಿವೆ.
ಸದ್ಯ ಶೇ 5, ಶೇ 12, ಶೇ 18, ಶೇ 28 ಹೀಗೆ ನಾಲ್ಕು ಹಂತದ ತೆರಿಗೆ ದರಗಳಿವೆ. ಇವುಗಳಲ್ಲಿ ಅತ್ಯಂತ ಕಡಿಮೆ ಹಂತದ ಶೇ 5ರಷ್ಟು ಇರುವ ತೆರಿಗೆ ದರವನ್ನು ಶೇ 8ಕ್ಕೆ ಹೆಚ್ಚಿಸುವ ಕುರಿತು ಸಮಿತಿಯು ಪ್ರಸ್ತಾಪಿಸುವ ಸಾಧ್ಯತೆ ಇದೆ. ಹೀಗೆ ಮಾಡುವುದರಿಂದ ಸರ್ಕಾರಕ್ಕೆ ವಾರ್ಷಿಕ ₹ 1.50 ಲಕ್ಷ ಕೋಟಿಗಳಷ್ಟು ಹೆಚ್ಚುವರಿ ವರಮಾನ ಬರಲಿದೆ.
ತೆರಿಗೆ ಹಂತವನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶ ಇದೆ. ಈ ಸಲುವಾಗಿ ಶೇ 8, ಶೇ 18 ಮತ್ತು ಶೇ 28ರ ಮೂರು ಹಂತದ ತೆರಿಗೆ ವ್ಯವಸ್ಥೆ ರೂಪಿಸುವ ಬಗ್ಗೆಯೂ ಸಮಿತಿಯು ಸಲಹೆ ನೀಡಲಿದೆ. ಹೀಗಾದಲ್ಲಿ, ಸದ್ಯ ಶೇ 12ರ ತೆರಿಗೆ ದರದಲ್ಲಿ ಬರುವ ಸರಕು ಮತ್ತು ಸೇವೆಗಳು ಶೇ 18ರ ತೆರಿಗೆ ದರದ ವ್ಯಾಪ್ತಿಗೆ ಬರಲಿವೆ ಎಂದು ಮೂಲಗಳು ಹೇಳಿವೆ.
ವರಮಾನ ಹೆಚ್ಚಿಸಿಕೊಳ್ಳಲು ಮತ್ತು ರಾಜ್ಯ ಸರ್ಕಾರಗಳು ಜಿಎಸ್‌ಟಿ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ಅನುಕೂಲ ಆಗುವಂತೆ ತೆರಿಗೆ ವಿನಾಯಿತಿ ಪಟ್ಟಿಯಲ್ಲಿ ಇರುವ ಸರಕು ಮತ್ತು ಸೇವೆಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆಯೂ ಸಮಿತಿಯು ಸಲಹೆ ನೀಡಲಿದೆ ಎಂದು ಹೇಳಲಾಗಿದೆ.