ಬಳ್ಳಾರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ದಾಖಲಾಗುವ ಗರ್ಭಿಣಿಯರ ಪ್ರಮಾಣ ಅರ್ಧಕರ್ಧ ಇಳಿದಿದೆ.
ನ. 10 ರಂದು ಸಿಸೇರಿಯನ್ ಮೂಲಕ ಹೆರಿಗೆಯಾದ ಬಳಿಕ ಐವಿ ಫ್ಲೂಯಿಡ್ ಗ್ಲೂಕೋಸ್ ರಿಯಾಕ್ಷನ್‌ನಿಂದಾಗಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಹೆರಿಗೆ ಬಂದಾಗ ಆರೋಗ್ಯವಾಗಿಯೇ ಇದ್ದ ಲಲಿತಾ, ನಂದಿನಿ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಏಕಾಏಕಿ ಅಸ್ವಸ್ಥರಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಈ ಪ್ರಕರಣದ ಬಳಿಕ ಆತಂಕಗೊಂಡಿರುವ ಗರ್ಭಿಣಿಯರು ಇಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಭಯ ಪಡುತ್ತಿದ್ದಾರೆ. ಗರ್ಭಿಣಿಯರಲ್ಲದೇ ಕುಟುಂಬಸ್ಥರೂ ಸರ್ಕಾರಿ ಆಸ್ಪತ್ರೆ ಕಡೆ ಮುಖ ಮಾಡದೇ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, ಆಸ್ಪತ್ರೆಗೆ ಹೆರಿಗೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಅರ್ಧಕ್ಕರ್ಧ ಇಳಿಕೆಯಾಗಿದೆ.
ಕಳೆದ ಮೂರು ತಿಂಗಳ ಅಂಕಿ ಅಂಶ ನೋಡುವುದಾದರೆ ಸೆಪ್ಟೆಂಬರ್‌ನಲ್ಲಿ 585, ಅಕ್ಟೋಬರ್‌ನಲ್ಲಿ 577 ಗರ್ಭಿಣಿಯರು ಹೆರಿಗೆಗೆ ದಾಖಲಾಗಿದ್ದರು. ನವೆಂಬರ್ ತಿಂಗಳಲ್ಲಿ ಬಾಣಂತಿಯರ ಸರಣಿ ಸಾವಾಗಿದ್ದರಿಂದ ಹೆರಿಗೆಗೆ ದಾಖಲಾಗುವ ಗರ್ಭಿಣಿಯರ ಸಂಖ್ಯೆ 289ಕ್ಕೆ ಕುಸಿದಿದೆ.
ಪ್ರತೀ ವರ್ಷ ಜಿಲ್ಲಾಸ್ಪತ್ರೆಯಲ್ಲಿ ಸರಿ ಸುಮಾರು ಆರು ಸಾವಿರ ಹೆರಿಗೆಗಳು ಆಗುತ್ತಿದ್ದು ಪ್ರತಿ ತಿಂಗಳು ಕನಿಷ್ಟ 500 ಮಂದಿಯಾದರೂ ದಾಖಲಾಗುತ್ತಿದ್ದರು. ಆದರೆ ಒಂದೇ ತಿಂಗಳಿನಲ್ಲಿ ಇಷ್ಟೊಂದು ಸಂಖ್ಯೆ ಇಳಿಕೆಯಾಗಿದ್ದು ಇದೇ ಮೊದಲು ಎನ್ನಲಾಗಿದೆ.