ಬಲೂನ್ ಮಾರಾಟಗಾರರ ಸೋಗಿನಲ್ಲಿ ಹಗಲೆಲ್ಲಾ ಬಡಾವಣೆಗಳಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕನ್ನ ಹಾಕುತ್ತಿದ್ದ ರಾಜಸ್ಥಾನ ಮೂಲದ ಬಗಾರಿಯ ಗ್ಯಾಂಗ್‍ನ ಮೂವರನ್ನು ಅಮೃತಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ಬಗಾರಿಯಾ ಗ್ಯಾಂಗ್‍ನ ಮುಖೇಶ್ (25), ಧರ್ಮ (26), ಲಕ್ಷ್ಮಣ್ (25) ಬಂಧಿತರು. ತಲೆಮರೆಸಿಕೊಂಡಿರುವ ಗ್ಯಾಂಗ್‍ನ ಮೂವರು ಸದಸ್ಯರಿಗೆ ಶೋಧ ನಡೆಸಲಾಗುತ್ತಿದೆ. ಸದ್ಯ ಆರೋಪಿಗಳಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು.
ಆರೋಪಿಗಳ ತಂಡ ರಾಜಸ್ತಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಬಲೂನು ಖರೀದಿಸುತ್ತಿತ್ತು. ಹಗಲಿನಲ್ಲಿ ನಗರದಲ್ಲೆಲ್ಲಾ ಸುತ್ತಾಡಿ ಬಲೂನ್ ಮಾರಾಟ ಮಾಡುತ್ತಿದ್ದರು. ಆ ವೇಳೆ ಬೀಗ ಹಾಕಿರುವ ಐಶಾರಾಮಿ ಮನೆಗಳನ್ನು ಗುರುತಿಸುತ್ತಿದ್ದರು. ಆ ಮನೆಗಳಿಗೆ ಹೋಗಿ ಬೆಲ್ ಮಾಡುತ್ತಿದ್ದರು. ಯಾರೂ ಮನೆಯಿಂದ ಹೊರಗೆ ಬಾರದೇಯಿದ್ದರೆ, ಒಂದೆರಡು ದಿನ ಮನೆಯನ್ನು ಗಮನಿಸುತ್ತಿದ್ದರು. ನಂತರ ಮಧ್ಯ ರಾತ್ರಿ ಮನೆಗೆ ಕನ್ನ ಹಾಕಿ ಲಾಕರ್ ಒಡೆದು ಕೆಲವೇ ನಿಮಿಷಗಳಲ್ಲಿ ಚಿನ್ನಾಭರಣ ದೋಚುತ್ತಿದ್ದರು. ಕದ್ದ ಚಿನ್ನಾಭರಣವನ್ನು ರಾಜಸ್ತಾನದ ಜುವೆಲ್ಲರಿ ಅಂಗಡಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಒಂದು ವೇಳೆ ಬೆಲ್ ಮಾಡಿದಾಗ ಮನೆಯಿಂದ ಯಾರಾದರೂ ಹೊರ ಬಂದರೆ ಬಲೂನ್ ಖರೀದಿಸುವಂತೆ ಒತ್ತಾಯಿಸಿ ಅಲ್ಲಿಂದ ತೆರಳುತ್ತಿದ್ದರು.