ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ನಮ್ಮ ಕುಟುಂಬವನ್ನು ಸಿಲುಕಿಸಿ ಹಾಸನದಿಂದ ಹೊರಹಾಕಲು ಷಡ್ಯಂತ್ರ ಮಾಡಲಾಗಿದೆ. ಇದರಲ್ಲಿ ಯಾರೆಲ್ಲಾ ಇದ್ದಾರೆ ಎಂದು ಶೀಘ್ರದಲ್ಲೇ ಬಯಲು ಮಾಡ್ತೀನಿ ಎಂದು ಸೂರಜ್ ರೇವಣ್ಣ ಹೇಳಿದ್ದಾರೆ.
ಸೂರಜ್ ರೇವಣ್ಣ ವಿರುದ್ಧ ಯುವಕನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣವಿದೆ. ಈ ಸಂಬಂಧ ಬಂಧನದಲ್ಲಿದ್ದ ಅವರು ಈಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತಂದೆ ಎಚ್ ಡಿ ರೇವಣ್ಣ ಕೂಡಾ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಪಡೆದಿದ್ದರು. ಆದರೆ ತಮ್ಮ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪ ಕುರಿತಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಈಗಲೂ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಇದೆಲ್ಲಾ ತಮ್ಮ ಕುಟುಂಬವನ್ನು ಹಾಸನದಿಂದ ಹೊರಹಾಕಲು ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಷಡ್ಯಂತ್ರ ಎಂದು ಸೂರಜ್ ಆರೋಪಿಸಿದ್ದಾರೆ. ಪೆನ್ ಡ್ರೈವ್ ಬಿಡುಗಡೆ ಮಾಡಿದವರ ವಿರುದ್ಧ ಇದುವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ, ಯಾರನ್ನೂ ಬಂಧಿಸಿಲ್ಲವೇಕೆ? ಇದೆಲ್ಲಾ ಷಡ್ಯಂತ್ರದ ಭಾಗ. ಸದ್ಯದಲ್ಲೇ ಎಲ್ಲವನ್ನೂ ಬಹಿರಂಗಪಡಿಸುತ್ತೆನೆ ಎಂದು ಸೂರಜ್ ಹೇಳಿದ್ದಾರೆ.
ನಮ್ಮ ಮೇಲೆ ಕುತಂತ್ರ, ಷಡ್ಯಂತ್ರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ಕೊಡ್ತೀನಿ. ರೇವಣ್ಣನವರಿಗೆ ಯಾವ ಪ್ರಕರಣದಲ್ಲೂ ಸಂಬಂಧವೇ ಇಲ್ಲ. ಆದರೂ ಜೈಲಿಗೆ ಹಾಕಿಸಿದರು. ಭವಾನಿ ರೇವಣ್ಣ ಟೆರರಿಸ್ಟಾ ಎಂದು ಪ್ರಶ್ನಿಸಿದ್ದಾರೆ.