ಬೆಂಗಳೂರು : ಕೊರೊನಾ ಆತಂಕದ ನಡುವೆಯೂ ಕರ್ನಾಟಕದಲ್ಲಿ ಆಗಸ್ಟ್ 23ರಿಂದ ಮೊದಲ ಹಂತದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶಾಲೆ ಆರಂಭದ ಬಗ್ಗೆ ಸರ್ಕಾರಿ, ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ನೀಡಲಾಗಿದೆ. ಶಾಲೆ ಆರಂಭದ ದಿನ ಬೆಂಗಳೂರಿನ ಕೆಲ ಶಾಲೆಗಳಿಗೆ ನಾನು ಮತ್ತು ಶಿಕ್ಷಣ ಸಚಿವರು ಭೇಟಿ ನೀಡುತ್ತೇವೆ. ಶಿಕ್ಷಕರಿಗೆ ಕೊವಿಡ್ ಲಸಿಕೆಯನ್ನು ನೀಡಲಾಗಿದೆ. ಪೋಷಕರ ಸಮ್ಮತಿ ಪಡೆದು ಮಕ್ಕಳು ಯಾವುದೇ ಆತಂಕ ಇಲ್ಲದೆ ಶಾಲೆಗೆ ಬರಬಹುದು ಎಂದು ತಿಳಿಸಿದ್ದಾರೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಷಕರೂ ಸಹ ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಉಳಿದಂತೆ ಶಾಲೆ ಆರಂಭಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಯಾವುದೇ ಗೊಂದಲ ಇಲ್ಲ. ಮಾರ್ಗಸೂಚಿ ಅನ್ವಯ ತರಗತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.
ಆಗಸ್ಟ್ 23 ರಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆ ಆರಂಭ ಮಾಡಲು ಸಿದ್ಧತೆ ನಡೆದಿದೆ. ಹಂತ ಹಂತವಾಗಿ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಹೊರತುಪಡಿಸಿ ಮಿಕ್ಕೆಲ್ಲಾ ಕಡೆಗಳಲ್ಲೂ 9 ರಿಂದ 12 ನೇ ತರಗತಿಗಳಿಗೆ ಮೊದಲ ಹಂತದಲ್ಲಿ ಶಾಲೆ ಶುರುವಾಗಲಿದೆ.