ಬೆಂಗಳೂರು: ರಾಜ್ಯದ ಗಡಿ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡು ಜಾಲವೊಂದು ವ್ಯವಸ್ಥಿತವಾಗಿ ಬೀದರ್ ಬಳಿಕ ದಕ್ಷಿಣ ಕನ್ನಡದ ಉಲ್ಲಾಳದಲ್ಲೂ ಹಾಡು ಹಗಲೇ ಬಂದೂಕು ತೋರಿಸಿ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನ ಲೂಟಿಮಾಡಿರುವ ಘಟನೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅರಾಜಕತೆ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬರೆದುಕೊಂಡಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕವೆಂದರೆ ಮಾಫಿಯಾಗಳು, ಅತ್ಯಾಚಾರಿಗಳು, ಡಕಾಯಿತರು ಹಾಗೂ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎಂಬ ಸಂದೇಶ ರವಾನೆಯಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತದ ಕೆಟ್ಟ ವೈಫಲ್ಯದ ಫಲವಾಗಿದೆ.
'ಸಿರಿನಾಡು ಕರ್ನಾಟಕ ಇರಿಯುವ ರಕ್ಕಸರ ತವರೂರಾಗುತ್ತಿದೆ, ಕ್ರಿಮಿನಲ್ ಕರ್ನಾಟಕ ಎಂಬ ಅಪಕೀರ್ತಿ ಪಡೆದುಕೊಳ್ಳುತ್ತಿದೆ' ಎಂಬ ಆತಂಕ ಜನರನ್ನು ಕಾಡುತ್ತಿದೆ. ಒಂದರಮೇಲೊಂದು ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿವೆ. ಅತ್ಯಾಚಾರ, ಗುಂಡಾಗಿರಿ, ಕೊಲೆ, ದರೋಡೆ ಮೊದಲಾದ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತದಲ್ಲಿ ಜನತೆ ಆತಂಕದಿಂದ ಬದುಕುವಂತಾಗಿದೆ. ತಮ್ಮ ಹಣ ಚಿನ್ನ ಹಾಗೂ ಇತರ ಆಸ್ತಿಗಳಿಗೆ ಬ್ಯಾಂಕ್ ಸುರಕ್ಷಿತ ಎಂಬ ಭಾವನೆ ಕುಸಿಯುತ್ತಿದೆ.
ಬ್ಯಾಂಕುಗಳಿಗೇ ರಕ್ಷಣೆ ನೀಡಲಾಗದ ಸರ್ಕಾರ ಜನಸಾಮಾನ್ಯರ ಪ್ರಾಣ ಹಾಗೂ ಆಸ್ತಿಗೆ ರಕ್ಷಣೆ ನೀಡಲು ಸಾಧ್ಯವೇ ? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ಗೃಹ ಇಲಾಖೆಯ ಮೇಲೆ ನಿಯಂತ್ರಣ ಸಾಧಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಜನರಲ್ಲಿ ರಕ್ಷಣೆಯ ಅಭಯ ನೀಡುವ ಹೆಜ್ಜೆಗಳನ್ನಿಡಲೇಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ನಿಷ್ಕ್ರಿಯತೆ ಹಾಗೂ ಉದಾಸೀನತೆಯನ್ನು ಮುಂದುವರೆಸಿದರೆ ಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.<>