Webdunia - Bharat's app for daily news and videos

Install App

ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ನನಗೆ ಇನ್ನೂ ಹೆಚ್ಚು ಶಕ್ತಿ ಬರುತ್ತೆ: ಸಿದ್ದರಾಮಯ್ಯ

Krishnaveni K
ಸೋಮವಾರ, 4 ನವೆಂಬರ್ 2024 (16:14 IST)
ಶಿಗ್ಗಾಂವ್: ಅಜ್ಜನೂ ಮುಖ್ಯಮಂತ್ರಿಯಾಗಿ, ಅಪ್ಪನೂ ಮುಖ್ಯಮಂತ್ರಿ ಆಗಿದ್ದವರ ಮಗನ ವಿರುದ್ಧ ಸಾಮಾನ್ಯ ಕುಟುಂಬದ ಪೈಲ್ವಾನ್ ಪಠಾಣ್ ಕಣದಲ್ಲಿದ್ದಾರೆ. ಇವರನ್ನು ಗೆಲ್ಲಿಸಿ, ವಿಧಾನಸೌಧಕ್ಕೆ ಕಳುಹಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದರು. 
 
ಹುಲಗೂರ ಗ್ರಾಮದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ವಿರುದ್ಧ ಸಾಮಾನ್ಯ ಕುಟುಂಬದ ಪಠಾಣ್ ಅವರನ್ನು ಗೆಲ್ಲಿಸಿ ಎಂದರು.
 
ಕೊರೋನಾ ಸಂದರ್ಭದಲ್ಲಿ ಸತ್ತ ಹೆಣಗಳ ಲೆಕ್ಕದಲ್ಲೂ ಲಂಚ ಪಡೆದು ದಾಖಲೆ ಮಾಡಿದವರು ಬಸವರಾಜ ಬೊಮ್ಮಾಯಿ. ಸತ್ತ ಹೆಣಗಳ‌ ಲೆಕ್ಕದಲ್ಲೂ ಲಂಚ ಪಡೆದ ಏಕೈಕ ಸರ್ಕಾರ ಬೊಮ್ಮಾಯಿ ಅವರದ್ದಾಗಿತ್ತು. ಕೋವಿಡ್ ಸಂದರ್ಭದಲ್ಲೂ, ಸಂಕಷ್ಟದಲ್ಲಿ ನರಳುವಾಗಲೂ ಲಂಚ ಪಡೆದವರ ಪುತ್ರನನ್ನು ಸೋಲಿಸಿ ಎಂದರು.
 
ಅಜ್ಜಂಪೀರ್ ಖಾದ್ರಿ  ನನಗೆ ತುಂಬಾ ಬೇಕಾದವರು.  ನನಗಾಗಿ ಖಾದ್ರಿ ಶಾಸಕ ಸ್ಥಾನ ತ್ಯಜಿಸಲು ಸಿದ್ದರಾಗಿದ್ದರು. ನಾನು ಸೋತು, ಖಾದ್ರಿ ಗೆದ್ದಿದ್ದಾಗ ಸ್ವತಃ ಖಾದ್ರಿಯವರೇ  ಬಂದು ಅವರು ಶಾಸಕ ಸ್ಥಾನವನ್ನು ನನಗಾಗಿ ಬಿಟ್ಟು ಕೊಡಲು ಸಿದ್ದರಾಗಿದ್ದರು. ನಮ್ಮಿಬ್ಬರ ನಡುವೆ ಅಷ್ಟು ಆತ್ಮೀಯತೆ. ಹೀಗಾಗಿ ನಮ್ಮ ಮಾತಿಗೆ ಬೆಲೆ ನೀಡಿ ನಾಮಪತ್ರ ವಾಪಾಸ್ ಪಡೆದು ಪಠಾಣ್ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
 
ಮೋದಿಯ ಸುಳ್ಳುಗಳು
 
ಸಿದ್ದರಾಮಯ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದ್ದರು. ಆದರೆ ನಮ್ಮ ಸರ್ಕಾರ ಜಾರಿಗೆ ಬಂದ ಎಂಟೇ ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಲಕ್ಷಾಂತರ ತಾಯಂದಿರು ಗ್ಯಾರಂಟಿಗಳ ಅನುಕೂಲಗಳನ್ನು ಪ್ರತೀ ದಿನ ಪಡೆಯುತ್ತಿದ್ದಾರೆ. ಮೋದಿ ಅವರ ಸುಳ್ಳುಗಳು ಮಾತ್ರ ನಿಲ್ಲುತ್ತಲೇ ಇವೆ ಎಂದು ಟೀಕಿಸಿದರು.
 
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ, "ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇಲ್ಲ" ಎಂದು ಯಡಿಯೂರಪ್ಪ ಹೇಳಿದ್ದರು‌. ಹೋಗಲಿ ಬಸವರಾಜ ಬೊಮ್ಮಾಯಿ ಅವರೂ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇವರು ಯಾವ ಮುಖ ಇಟ್ಟುಕೊಂಡು ರೈತರ ಮತ ಕೇಳುತ್ತಿದ್ದಾರೆ ಎಂದರು.
 
ಕ್ಷೇತ್ರಕ್ಕೆ ಏನು ಕೊಟ್ರಿ ಬೊಮ್ಮಾಯಿಯವರೇ?
 
ಕೃಷಿ ಸಚಿವರಾಗಿ, ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ನಿಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿದ್ದೀರಿ ಬೊಮ್ಮಾಯಿಯವರೇ? ನೀವು ಸಿಎಂ‌ ಆಗಿದ್ದಾಗಲಾದರೂ ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲವಲ್ಲಾ ಏಕೆ ಸ್ವಾಮಿ ಎಂದು ಪ್ರಶ್ನಿಸಿದರು.
 
ಜನರಿಗೆ ಹೇಳಲು ಬಿಜೆಪಿ ಬಳಿ ಸುಳ್ಳು ಬಿಟ್ಟರೆ ಬೇರೆ ಏನೂ ಇಲ್ಲ
 
ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಿಂದುಳಿದವರಿಗೆ, ದಲಿತರಿಗೆ, ಮಹಿಳೆಯರಿಗೆ, ಬಡವರಿಗೆ ಇಂತಿಂಥಾ ಕೆಲಸ ಮಾಡಿದ್ದೇವೆ ಎಂದು ಜನರಿಗೆ ಹೇಳಲು ಏನೂ ಇಲ್ಲ. ಏನಾದ್ರೂ ಜನರ ಕೆಲಸ ಮಾಡಿದ್ರೆ ತಾನೆ ಎಂದ ಸಿಎಂ,  ಬಿಜೆಪಿ ಬಳಿ ಸುಳ್ಳು ಬಿಟ್ಟರೆ ಬೇರೆ ಏನೂ ಇಲ್ಲ ಎಂದರು. 
 
ವಕ್ಫ್ ಭೂಮಿ ತೆರವುಗೊಳಿಸಿ ಎಂದು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಸರ್ಕಾರದಲ್ಲೂ ನೋಟಿಸ್ ನೀಡಿದ್ದರು. ನಾನು ಎಲ್ಲಾ ನೋಟಿಸ್ ವಾಪಾಸ್ ಪಡೆಯಲು ಸೂಚಿಸಿ, ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಮೇಲೂ ಪ್ರತಿಭಟನೆ ಮಾಡ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.
 
ಸಿದ್ದರಾಮಯ್ಯ ಕಂಡರೆ ಹೊಟ್ಟೆಯುರಿ 
 
ನಮ್ಮ ಸರ್ಕಾರ ಬಡವರು, ಮಧ್ಯಮ ವರ್ಗದವರ ಪರವಾಗಿ ಗ್ಯಾರಂಟಿಗಳನ್ನು ರೂಪಿಸಿ ಜಾರಿಗೆ ತಂದಿದ್ದಕ್ಕಾಗಿ ಬಿಜೆಪಿಗೆ ನನ್ನನ್ನು ಕಂಡರೆ ಹೊಟ್ಟೆಯುರಿ. ಪಠಾಣ್ ಅವರನ್ನು ಗೆಲ್ಲಿಸುವ ಮೂಲಕ ಅವರ ಹೊಟ್ಟೆಕಿಚ್ಚಿಗೆ ಸರಿಯಾದ ಪಾಠ ಕಲಿಸಿ ಎಂದು ಕರೆ ನೀಡಿದರು. 
 
ಶಗ್ಗಾಂವ್, ಸವಣೂರು ಏತ ನೀರಾವರಿಗೆ ಹಣ ಕೊಟ್ಟವರು ನಾವು. ಬೊಮ್ಮಾಯಿಯವರೇ ನೀವೇನು ಮಾಡಿದ್ರಿ ಸ್ವಾಮಿ ? 
 
ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂದ್ರಲ್ಲಾ  ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಮಾಡಿದ್ರಾ ? ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಕೋಟಿ ಮಾತ್ರ. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ವ್ಯಂಗ್ಯವಾಡಿದರು.
 
 
ದೇಶದ ಆರ್ಥಿಕತೆ ಎಕ್ಕುಡಿಸಿ, ನಿರುದ್ಯೋಗ ಸಮಸ್ಯೆ ವಿಪರೀತ ಹೆಚ್ಚಿಸಿ, ಡಾಲರ್ ಎದುರು ರೂಪಾಯಿ ಬೆಲೆ ಕುಸಿಯುವಂತೆ ಮಾಡಿ, ಡೀಸೆಲ್, ಗ್ಯಾಸ್, ಪೆಟ್ರೋಲ್,  ಎಣ್ಣೆ, ಚಿನ್ನ, ಕಾಳು, ಬೇಳೆ ಎಲ್ಲದರ ಬೆಲೆ ಹೆಚ್ಚಿಸಿದ ಮೋದಿಯವರೇ ನೀವು ನಮಗೆ ಬುದ್ದಿ ಹೇಳೋಕೆ ಬರ್ತೀರಾ ಎಂದು ಮೋದಿಯವರ ಎದುರು ಅವರ ಸಾಲು ಸಾಲು ವೈಫಲ್ಯಗಳನ್ನು ಉಲ್ಲೇಖಿಸಿ ಪ್ರಶ್ನಿಸಿದರು. ಬೊಮ್ಮಾಯಿಯವರೇ ನಮ್ಮನ್ನು ಪ್ರಶ್ನಿಸುವ ಯಾವ ನೈತಿಕತೆ ನಿಮಗಿದೆ ಎಂದರು.
 
ಸಂಡೂರು, ಶಿಗ್ಗಾಂವ್, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ನನಗೆ ಇನ್ನಷ್ಟು ಶಕ್ತಿ ಬರುತ್ತದೆ. ಸಂಡೂರು, ಚನ್ನಪಟ್ಟಣದಲ್ಲೂ ನಾವು ಗೆಲ್ತೀವಿ. ಆದ್ದರಿಂದ ಇಲ್ಲಿ ಪಠಾಣ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments