ಬೆಂಗಳೂರು: ರಾಜ್ಯಪಾಲರ ಬಳಿ ಹೆಚ್.ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ಮತ್ತು ಮುರುಗೇಶ ನಿರಾಣಿ ಅವರ ಕುರಿತಾಗಿ ಅನುಮೋದನೆಗಾಗಿ ಬಾಕಿಯಿರುವ ವಿಷಯಗಳಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಲು ಹಾಗೂ ನ್ಯಾಯದ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯಪಾಲರಿಗೆ ಸಂವಿಧಾನದ 163 ನೇ ವಿಧಿಯನ್ವಯ ನೆರವು ಮತ್ತು ಸಲಹೆ ನೀಡಲು ಇಂದು ನಡೆದ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ ಎಂದು ಕಾನೂನು ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದರು.
ಸಂವಿಧಾನದ 163 ವಿಧಿ ಅನ್ವಯ ವಿಧಿ, ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಸಚಿವ ಸಂಪುಟಕ್ಕೆ ಅವಕಾಶವಿದೆ. ಅದರಂತೆ ಈ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು.
ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಹಲವು ಅನುಮೋದನಾ ಅರ್ಜಿಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿದೆ. ಈ ಅರ್ಜಿಗಳ ತನಿಖೆ ಬಳಿಕ ಕೆಲವು ಪ್ರಕರಣಗಳಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ ಪಿಸಿ ಆಕ್ಟ್ ಸೆಕ್ಷನ್ ಹಾಗೂ ವಿವಿಧ ಕಾಯ್ದೆಗಳ ಅಡಿಯಲ್ಲಿ ಅನುಮೋದನೆಗಾಗಿ ಕೋರಲಾಗಿದೆ. ಕೆಲವು ಅರ್ಜಿಗಳು ಪಿಸಿ ಆಕ್ಟ್ ಸೆಕ್ಷನ್ 17 ಎ ಅಡಿಯಲ್ಲಿ ಪೂರ್ವಾನುಮೋದನೆಗಾಗಿ ರಾಜ್ಯಪಾಲರ ಬಳಿ ಬಾಕಿಯಿದೆ.
ಶಶಿಕಲಾ ಜೊಲ್ಲೆ ಅವರ ಪ್ರಕರಣದಲ್ಲಿ ದಿನಾಂಕ 9- 12- 2021 ರಂದು ಲೋಕಾಯುಕ್ತ ಪೊಲೀಸರು ಪಿಸಿ ಆಕ್ಟ್ 17 ಎ ಅಡಿಯಲ್ಲಿ ಪೂರ್ವಾನುಮೋದನೆಯನ್ನು ಕೋರಿದ್ದರು. ಮುರುಗೇಶ್ ನಿರಾಣಿ ಪ್ರಕರಣದಲ್ಲಿ ಸಹ ಇದೇ ಕಾಯ್ದೆಯಡಿಯಲ್ಲಿ ದಿನಾಂಕ 26-2-24 ಪೂರ್ವಾನುಮೋದನೆ ಕೋರಲಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ದಿನಾಂಕ 21- 11- 2023 ರಂದು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 19 ಮತ್ತು ಸಿಆರ್‌ಪಿಸಿ 197 ಅಡಿಯಲ್ಲಿ ಅನುಮೋದನೆ ಕೋರಲಾಗಿತ್ತು. ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ ಸಲ್ಲಿಸಿದ ಆರೋಪ ಪಟ್ಟಿ ಕುರಿತು ರಾಜ್ಯಪಾಲರು ದಿನಾಂಕ 29-7-24 ರಂದು ಸ್ಪಷ್ಟೀಕರಣ ಕೇಳಿದ್ದರು. ಇದಕ್ಕೆ ಎಸ್‌ಐಟಿ ದಿನಾಂಕ 16- 8 -24 ರಂದು ರಾಜ್ಯಪಾಲರಿಗೆ ಅಗತ್ಯ ಸ್ಪಷ್ಟೀಕರಣ ನೀಡಿದೆ. ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ದಿನಾಂಕ 13- 5- 24ರಂದು ಅನುಮೋದನೆಗಾಗಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಮತ್ತು ಜನಾರ್ಧನ ರೆಡ್ಡಿ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ.
ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನ್ನು ಸ್ವೀಕರಿಸಲು ಬಾಧ್ಯಸ್ಥರಾಗಿದ್ದು, ಈ ವಿಷಯದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆಯನ್ನು ನ್ಯಾಯಯುತವಾಗಿ ಬಳಸಿಕೊಳ್ಳುವ ವಿಶ್ವಾಸವಿದೆ ಎಂದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡಿದ್ದು, ತರಾತುರಿಯಲ್ಲಿ ಸಂಜೆಯೊಳಗಾಗಿ ಶೋಕಾಸು ನೋಟೀಸು ನೀಡಲಾಗಿದೆ. ಆದರೆ ಈ ನಾಲ್ಕು ಪ್ರಕರಣಗಳು ಭಿನ್ನವಾಗಿದ್ದು, ಎಲ್ಲಾ ಪ್ರಕ್ರಿಯೆಗಳು ಮುಗಿದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಾರ್ವಜನಿಕರ ದೃಷ್ಟಿಯಲ್ಲಿ ರಾಜ್ಯಪಾಲರ ಕಚೇರಿ ಬಗ್ಗೆ ತಪ್ಪು ಭಾವನೆ ಬರಬಾರದು ಮತ್ತು ಯಾವುದೇ ಗೊಂದಲ ಆಗಬಾರದೆಂದು ಸಚಿವ ಸಂಪುಟ ನೆರವು ಮತ್ತು ಸಲಹೆ ನೀಡಲು ನಿರ್ಧರಿಸಿದೆ ಎಂದರು.<>