ಕಳೆದ ಒಂದು ತಿಂಗಳಿಂದ 14,500 ಅತಿಥಿ ಉಪನ್ಯಾಸಕರು ಸಾಕಷ್ಟು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಸರ್ಕಾರ ಇದೀಗ ಅಷ್ಟೂ ಉಪನ್ಯಾಸಕರನ್ನು ವಜಾ ಮಾಡುವ ಮೂಲಕ ಶಾಕ್ ಟ್ರೀಟ್‌ಮೆಂಟ್ ನೀಡಿದೆ. ಕಳೆದ ಒಂದು ತಿಂಗಳಿಂದ ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದರು.
ಆದ್ದರಿಂದ ಅವರನ್ನು ಸೇವೆಗೆ ಮತ್ತೆ ಸೇರಿಸಿಕೊಳ್ಳದೇ ಬದಲಿ ಉಪನ್ಯಾಸಕರ ನೇಮಕಕ್ಕೆ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಆದೇಶಿಸಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡ ಶಿಕ್ಷಕರನ್ನು ಕಾಲೇಜಿಗೆ ಸೇರಿಸಿಕೊಳ್ಳಿ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಭಾರೀ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಸೇವಾ ಭದ್ರತೆ ಒದಗಿಸುವುದು, ಬಾಕಿ ಇರುವ ಎಲ್ಲ ವೇತನ ಶೀಘ್ರದಲ್ಲಿ ಬಿಡುಗಡೆ ಮಾಡುವುದು. ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಆಗಿ ಸರ್ಕಾರದ ಆಡಳಿತದಲ್ಲಿ ವಿಲೀನಗೊಳಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದಾರೆ.