ಬೆಂಗಳೂರು: ಬಿಜೆಪಿ ವರಿಷ್ಠ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪತ್ನಿ ದಿ.ಮೈತ್ರಾದೇವಿ ಸಾವಿಗೆ ಶೋಭಾ ಕರಂದ್ಲಾಜೆ ಕಾರಣ ಎಂದಿದ್ದ ಸಚಿವ ಭೈರತಿ ಸುರೇಶ್ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಭೈರತಿ ಸುರೇಶ್ ಆರೋಪಕ್ಕೆ ಶೋಭಾ ಇಂದು ರೋಷಾವೇಷದಿಂದ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಭೈರತಿ ಸುರೇಶ್ ಒಬ್ಬ ದರೋಡೆಕೋರ. ಮುಡಾ ಹಗರಣದ ಬಗ್ಗೆ ತನಿಖೆಯಾಗುತ್ತದೆ ಎಂದಾದಾಗ ರಾತ್ರೋ ರಾತ್ರಿ ದಾಖಲೆಗಳನ್ನು ಹೊತ್ತೊಯ್ದರು. ಪೊಲೀಸರು ದಾಳಿ ಮಾಡಲು ಬಂದಾಗ ದರೋಡೆಕೋರರು ಪ್ರತಿದಾಳಿ ನಡೆಸುವ ಹಾಗೆ ಭೈರತಿ ಈಗ ಇಲ್ಲಸಲ್ಲದ ಆರೋಪದ ದಾಳಿ ಮಾಡುತ್ತಿದ್ದಾರೆ ಎಂದರು.
ಇನ್ನು, ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಇದೇ ಭೈರತಿ ಸುರೇಶ್ ಕಾರಣ ಅಂತ ಜನ ಮಾತನಾಡುತ್ತಿದ್ದಾರೆ. ಇದನ್ನು ಅವರು ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗುವ ಉದ್ದೇಶದಿಂದ ರಾಕೇಶ್ ಸಿದ್ದರಾಮಯ್ಯನವರನ್ನು ಅವರೇ ಕೊಂದರು ಎಂದರೆ ನಾವೂ ಆರೋಪ ಮಾಡುತ್ತೇವೆ. ಒಪ್ಪಿಕೊಳ್ಳುತ್ತಾರಾ ಅವರು ಎಂದು ಶೋಭಾ ಪ್ರಶ್ನೆ ಮಾಡಿದ್ದಾರೆ.
ನಾನು ಚಾಮುಂಡೇಶ್ವರಿ ದೇವಿಯ ಮುಂದೆ ನಿಂತು, ಸತ್ಯಪೂರ್ವಕವಾಗಿ ರಾಜಕಾರಣವನ್ನು ಸ್ವೀಕರಿಸಿದವಳು. ರಾಜಕೀಯಕ್ಕೋಸ್ಕರ ಕೊಲೆ, ದರೋಡೆ ಮಾಡುವವಳಲ್ಲ. ನಾನು ಓಡಿ ಹೋಗುತ್ತೇನೆ ಎಂದು ಕಾಂಗ್ರೆಸ್ ನ ಕೆಲವರು ತಮಾಷೆ ಮಾಡುತ್ತಿದ್ದಾರೆ. ಆದರೆ ನಾನು ಓಡಿ ಹೋಗುವವಳಲ್ಲ. ನಾನು ಇಲ್ಲಿಯೇ ಎದ್ದು ಸತ್ಯದ ದಾರಿಯಲ್ಲಿ ರಾಜಕಾರಣ ಮಾಡುವವಳು ಎಂದು ಶೋಭಾ ಗುಡುಗಿದ್ದಾರೆ.