ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಒಳಜಗಳ ಜೋರಾಗಿರುವ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರು ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ರಾಜ್ಯದಲ್ಲಿ ಜೋರಾಗಿದೆ. ಅದರ ಮಧ್ಯೆ ಸಚಿವ ಪರಮೇಶ್ವರ್ ಅವರು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ರಾಜೀನಾಮೆಯ ಮಾತು ಆಡಿದ್ದು, ಇದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಆಗದ್ದಕ್ಕೆ ಬೇಸರ ಹೊರಹಾಕಿರುವ ಪರಮೇಶ್ವರ್ ಅವರು ತುಮಕೂರಿನ ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ನಾನು ನಿಮ್ಮ ಕೈಗೆ ಸಿಗೋದಿಲ್ಲ ಎಂದು ನಿಮಗೆಲ್ಲ ನಿರಾಸೆಯಾಗಿರಬಹುದು. ಪಂಚಾಯಿತಿಗೆ ಬರೋದಿಲ್ಲ, ನಮನ್ನ ಮಾತಾಡಿಸೋದಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ, ಸಮಯ ನನ್ನ ಕೈಯಲ್ಲಿ ಇಲ್ಲ. ನೀವೆಲ್ಲಾ ದೊಡ್ಡ ಮನುಸ್ಸು ಮಾಡಿ ಒಂದೇ ಮಾತಲ್ಲಿ ಹೇಳಿಬಿಟ್ರೆ ನಾಳೇನೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
ಆಗ ವಿಚಲಿತಗೊಂಡ ಕಾರ್ಯಕರ್ತರು ರಾಜೀನಾಮೆ ಕೊಡಬೇಡಿ ಎಂದು ಹೇಳಿ, ಸಚಿವರಿಗೆ ಧೈರ್ಯ ತುಂಬಿದ್ದಾರೆ.