ಮಂಡ್ಯ : ಒಂದು ಕಡೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ.
ಈ ನಡುವೆ ಕಾವೇರಿ ನದಿ ನೀರು ಹೆಚ್ಚು ಪ್ರಮಾಣದಲ್ಲಿ ಹರಿಯುತ್ತಿರೋದ್ರಿಂದ ಪ್ರವಾಸಿಗರಲ್ಲಿ ತೀವ್ರ ನಿರಾಸೆ ಮೂಡುತ್ತಿದೆ. ಹೌದು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಿಂದ ಸಂಕಷ್ಟದ ಸೂತ್ರ ಅನುಸರಿಸಿ ತಮಿಳುನಾಡಿಗೆ ನೀರು ಹರಿಸುವ ಬದಲು ರಾಜ್ಯ ಸರ್ಕಾರ ತಮಿಳುನಾಡಿಗೆ ಸದ್ಯ 13 ಸಾವಿರ ಕ್ಯೂಸೆಕ್ಗೂ ಅಧಿಕ ಪ್ರಮಾಣದ ನೀರು ಹರಿಸುತ್ತಿದೆ.
ಇದು ರೈತರಿಗೆ ಹಾಗೂ ಜನರಲ್ಲಿ ಆಕ್ರೋಶವನ್ನು ಉಂಟು ಮಾಡಿದೆ. ಇತ್ತ ಕಾವೇರಿ ನದಿಗೆ ಕಳೆದ ಮೂರು ದಿನಗಳಿಂದ 10 ಸಾವಿರ ಕ್ಯೂಸೆಕ್ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ತಾತ್ಕಾಲಿಕವಾಗಿ ಬಂದ್ ಆಗಿದೆ.
ಕೆಆರ್ಎಸ್ ಡ್ಯಾಂನಿಂದ ಕಾವೇರಿ ನದಿಗೆ 10 ಸಾವಿರಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ರೆ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ರದ್ದು ಆಗುತ್ತೆ. ಇಲ್ಲಿ ಮೋಟಾರ್ ಬೋಟ್ ಇಲ್ಲದ ಕಾರಣ ಮಾನವ ಚಲಿತ ದೋಣಿಗಳನ್ನು ಬಳಕೆ ಮಾಡಲಾಗುತ್ತದೆ. 10 ಸಾವಿರ ಕ್ಯೂಸೆಕ್ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ವೇಳೆ ಇಲ್ಲಿ ಸೆಳೆತ ಹೆಚ್ಚಿರುವ ಕಾರಣ ದೋಣಿಯನ್ನು ಚಲಿಸಲು ಕಷ್ಟವಾಗುತ್ತದೆ. ಹೀಗಾಗಿ ದೋಣಿ ವಿಹಾರವನ್ನು ಬಂದ್ ಮಾಡಲಾಗುತ್ತದೆ.