ಬಹು ಅಂಗಾಂಗ ವೈಫಲ್ಯದಿಂದ ಬೆಲ್ಜಿಯಂ ರಾಷ್ಟ್ರದಲ್ಲಿ ನಿಧನರಾದ ಸಿಎಂ ಸಿದ್ದರಾಮಯ್ಯ ಜೇಷ್ಠಪುತ್ರ ರಾಕೇಶ್ ಅವರ ಪಾರ್ಥಿವ ಶರೀರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮೈಸೂರಿಗೆ ತಲುಪಿದ್ದು, ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಮೈಸೂರಿನ ಜನರು ಆಗಮಿಸಿದ್ದಾರೆ.
ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ರಾಕೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಕೇಶ್ ಅವರ ಪಾರ್ಥಿವ ಶರೀರ ಮೈಸೂರಿಗೆ ಆಗಮಿಸಿದಂತೆಯೇ ಸಾವಿರಾರು ಜನ ಅಂತಿಮ ದರ್ಶನಕ್ಕೆ ಮುಗಿಬಿದ್ದಿದ್ದಾರೆ.
ಅಂತಿಮ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನಸ್ತೋಮ ಆಗಮಿಸಿದ್ದು, ಎಲ್ಲ ಆಸನಗಳು ಭರ್ತಿಯಾಗಿವೆ. ವಿಐಪಿ ಪಾಸ್ ಇದ್ದರೂ ಸಹ ಗಣ್ಯರು ಕುಳಿತುಕೊಳ್ಳಲು ಆಸನಗಳಿಲ್ಲದೆ ಪರದಾಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಜೇಷ್ಠಪುತ್ರ ರಾಕೇಶ್ ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4.30 ರ ಸುಮಾರಿಗೆ ಮೈಸೂರು ಹೊರವಲಯದ ಟಿ.ಕಾಟೂರಿನ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ರಾಕೇಶ್ ಪಾರ್ಥಿವ ಶರೀರಕ್ಕೆ ಗಣ್ಯರಿಂದ ಅಂತಿಮ ನಮನ!
ಬಹು ಅಂಗಾಂಗ ವೈಫಲ್ಯದಿಂದ ಬೆಲ್ಜಿಯಂ ರಾಷ್ಟ್ರದಲ್ಲಿ ನಿಧನರಾದ ಸಿಎಂ ಸಿದ್ದರಾಮಯ್ಯ ಜೇಷ್ಠಪುತ್ರ ರಾಕೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅವಕಾಶ ನೀಡಲಾಗಿದ್ದು, ರಾಜ್ಯದ ಗಣ್ಯರು ಸೇರಿದಂತೆ ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆದುಕೊಂಡರು.
ಕೇಂದ್ರ ಸಚಿವ ಸದಾನಂದ ಗೌಡವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕರ್ನಾಟಕ ಉಸ್ತುವಾರಿ ಸಚಿವ ದಿಗ್ವೀಜಯ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣ, ಸೇರಿದಂತೆ ರಾಜ್ಯದ ವಿವಿಧ ರಾಜಕೀಯ ಮುಖಂಡರು, ಸಚಿವರು ಹಾಗೂ ಶಾಸಕರು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ರಾಕೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡು, ಪುತ್ರನ ಅಗಲಿಕೆಯಿಂದ ದುಃಖದಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾಂತ್ವನ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ನಿಧನದಿಂದ ಮೈಸೂರು ಜಿಲ್ಲೆಯಲ್ಲಿ ನಿರವ ಮೌನ ಆವರಿಸಿದ್ದು, ಅವರ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ರಾಕೇಶ್ ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 5 ಗಂಟೆ ಸುಮಾರಿಗೆ ಮೈಸೂರು ಹೊರವಲಯದ ಟಿ.ಕಾಟೂರಿನ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.