Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿದ ಹೆಚ್‌ಡಿಕೆ

ಸರ್ಕಾರದ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿದ ಹೆಚ್‌ಡಿಕೆ
ಬೆಂಗಳೂರು , ಶುಕ್ರವಾರ, 22 ಮೇ 2015 (12:10 IST)
2015ನೇ ಸಾಲಿನ ಪಿಯು ಫಲಿತಾಂಶದಲ್ಲಿ ತೊಂದರೆ ಉಂಟಾಗಿ ಆತಂಕಕ್ಕೀಡಾಗಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 
 
ನಗರದ ಮಲ್ಲೇಶ್ವರಂನಲ್ಲಿರುವ ಪಿಯುಸಿ ಪರೀಕ್ಷಾ ಮಂಡಳಿಯ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. 
 
ಈ ಪ್ರಕರಣದಲ್ಲಿ ಸರ್ಕಾರವು ಪ್ರಮುಖವಾಗಿ ಮಾಡಬೇಕಿರುವ ಕೆಲಸವೆಂದರೆ ಈಗಾಗಲೇ ಸಿಇಟಿ ಫಲಿತಾಂಶವನ್ನು ಮೇ 27ಕ್ಕೆ ಪ್ರಕಟಗೊಳಿಸಲು ತೀರ್ಮಾನಿಸಲಾಗಿದ್ದು, ಅದನ್ನು ಸುಮಾರು 15 ದಿನಗಳ ಕಾಲ ಮುಂದೂಡಬೇಕು. ಏಕೆಂದರೆ ಈ ಫಲಿತಾಂಶ ಸಮಸ್ಯೆ ಬಗೆ ಹರಿಯುವ ಮುನ್ನ ಸಿಇಟಿ ಫಲಿತಾಂಶ ಪ್ರಕಟವಾದಲ್ಲಿ ಮಕ್ಕಳಿಗೆ ಮತ್ತಷ್ಟು ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆ ಬಗೆಹರಿಯುವವರೆಗೆ ಸಿಇಟಿ ಫಲಿತಾಂಶ ಮುಂದೂಡಲಿ ಎಂದರು. 
 
ಇದೇ ವೇಳೆ, ಸರ್ಕಾರ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ನಿರ್ದೇಶನ ನೀಡುತ್ತಿದ್ದು, ಶುಲ್ಕ ಮಾತ್ರ ಗಗನಕ್ಕೇರಿದೆ. ಇದು ಬಡ ವಿದ್ಯಾರ್ಥಿಗಳಿಗೆ ಭರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಶುಲ್ಕದಲ್ಲಿ ಮೊದಲು ವಿನಾಯಿತಿ ಘೋಷಿಸಲಿ ಎಂದ ಅವರು, ಮುಖ್ಯಮಂತ್ರಿಗಳು ನಾನೂ ಅಹಿಂದ ವರ್ಗಕ್ಕೆ ಸೇರಿದವನಾಗಿದ್ದು, ನಮ್ಮ ಸರ್ಕಾರ ಅಹಿಂದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ ಈ ಪ್ರಕರಣದಲ್ಲಿ ದಲಿತರಿಗೇ ಹೆಚ್ಚಿನ ಪೆಟ್ಟು ಬಿದ್ದಿದೆ. ಇದನ್ನು ಸಿದ್ದರಾಮಯ್ಯನವರು ಸ್ಮರಿಸಿಕೊಳ್ಳಲಿ ಎಂದರು. 
 
ಬಳಿಕ, ಪರೀಕ್ಷಾ ಮಂಡಳಿಯ ಈ ಯಡವಟ್ಟಿನಿಂದ ರಾಜ್ಯದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪರ್ವ ಆರಂಭವಾಗಿದೆ. ಆದರೂ ರಾಜ್ಯದಲ್ಲಿ ಶಿಕ್ಷಣ ಸಚಿವರು ಎನಿಸಿಕೊಂಡವರು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂಧಿಸದೆ ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಸುಳಿಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಟೂಕಿಸಿದ ಅವರು, ನಿನ್ನೆ ಸಚಿವರು ಅದಕ್ಕಾಗಿಯೇ ಶಿವಮೊಗ್ಗಕ್ಕೆ ತೆರಳಿದ್ದರೇನೋ ಎಂದು ಕಿಚಾಯಿಸಿದರು. 
 
ನಾನು ಇಂದು ಮಧ್ಯಾಹ್ನ 2 ಗಂಟೆ ವರೆಗೆ ಸಚಿವರು ತಮ್ಮ ನಿರ್ಧಾರ ಪ್ರಕಟಿಸಲು ಅವಕಾಶ ನೀಡುತ್ತೇನೆ. ಆ ಬಳಿಕ ವಿದ್ಯಾರ್ಥಿಗಳ ಪರವಾಗಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ. ಮಂಡಳಿಯಲ್ಲಿ ಬೇಜವಾಬ್ದಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಅವರಿಂದಲೇ ಈ ಪರಿಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ಈ ಸಂಬಂಧ ಇದಕ್ಕೂ ಮೊದಲೇ ತನ್ನ ನಿರ್ಧಾರವನ್ನು ಪ್ರಕಟಿಸಬೇಕಿತ್ತು. ಆದರೆ ಇಷ್ಟಾದರೂ ನಿರ್ಧಾರ ಪ್ರಕಟಿಸದೆ ಉದ್ಧಟತನ ತೋರುತ್ತಿರುವುದು ಸೋಜಿಗದ ಸಂಗತಿ ಎಂದು ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು.  
 
ಪ್ರತಿಭಟನೆಗೆ ಕಾರಣವೇನು?
ಪಿಯುಸಿ ಫಲಿತಾಂಶವು ಕಳೆದ ಮೇ 18ರಂದು ಪ್ರಕಟವಾಗಿದ್ದು, ಸರ್ಕಾರವೇ 3 ವೆಬ್‌ಸೈಟ್‌ಗಳನ್ನು ಬಿಡುಗಡೆ ಗೊಳಿಸಿತ್ತು. ಆದರೆ ಒಂದೊಂದು ವೆಬ್‌ಸೈಟ್‌ಗಳಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶನವಾಗುತ್ತಿದೆ. ಉದಾಹರಣೆಗೆ ಒಂದರಲ್ಲಿ ಒಂದು ತೆರನಾದ ಅಂಕಗಳಿದ್ದರೆ, ಮತ್ತೊಂದರಲ್ಲಿ ಮತ್ತೊಂದು ತೆರನಾದ ಅಂಕ ಪ್ರದರ್ಶನವಾಗುತ್ತಿದೆ. ಅಂತೆಯೇ ಒಂದರಲ್ಲಿ ಕಡಿಮೆ ಅಂಕ ತೋರುತ್ತಿದೆ ಎಂದು ಆತಂಕಕ್ಕೀಡಾಗಿರುವಾಗಲೇ ಮತ್ತೊಂದರಲ್ಲಿ ಪರೀಕ್ಷೆಗೆ ಗೈರು ಹಾಜರು ಎಂದು ತೋರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಜ್ಯದ ಮಂತ್ರಿಗಳೂ ಸೇರಿದಂತೆ ಸರ್ಕಾರದ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡದೇ ತಮ್ಮ ಕುರುಡುತನ ಪ್ರದರ್ಶಿಸುತ್ತಿದ್ದಾರೆ. 

Share this Story:

Follow Webdunia kannada