ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಇಂದು) ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಮಂಡ್ಯ ಮತ್ತು ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 11:10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ ಮಂಡ್ಯಗೆ ತೆರಳಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಮಾಡಲಿದ್ದಾರೆ. ಮಂಡ್ಯದ ಅಮರಾವತಿ ಹೋಟೆಲ್ ಬಳಿ ಎಕ್ಸ್ಪ್ರೆಸ್ ಹೈವೇಯಲ್ಲಿ ಮಧ್ಯಾಹ್ನ 11:40ಕ್ಕೆ ಹೆದ್ದಾರಿ ಲೋಕಾರ್ಪಣೆಗೊಳ್ಳಲಿದೆ.
ಎಕ್ಸ್ಪ್ರೆಸ್ವೇ ಉದ್ಘಾಟನೆ ಬಳಿಕ ಮೋದಿ ಅವರು ಮಂಡ್ಯದಲ್ಲಿ 1.8 ಕಿಮೀ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 12:15ರಿಂದ 1:15ರವರೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮದ್ದೂರಿನ ಗೆಜ್ಜಲಗೆರೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ 5,700 ಕೋಟಿ ವೆಚ್ಚದ ಮಂಡ್ಯ-ಕುಶಾಲನಗರ ಹೆದ್ದಾರಿಗೆ ಭೂಮಿ ಪೂಜೆ ಮಾಡಲಿದ್ದಾರೆ.
ಜೊತೆಗೆ ಹಲವು ಕೇಂದ್ರ ಸರ್ಕಾರದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಹೆಲಿಪ್ಯಾಡ್ನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಮಧ್ಯಾಹ್ನ 1:30ಕ್ಕೆ ಹುಬ್ಬಳಿಗೆ ತೆರಳಲಿದ್ದಾರೆ.