ಹಬ್ಬದ ಸೀಸನ್ನಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಖಾದಿ ಉಡುಗೊರೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅಹ್ಮದಬಾದ್ನ ಸಾಬರಮತಿ ನದಿ ತೀರದಲ್ಲಿ ನಡೆದ 'ಖಾದಿ ಉತ್ಸವ'ದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಖಾದಿಯು ಸ್ವಾತಂತ್ರ್ಯಾನಂತರ ನಿರ್ಲಕ್ಷಕ್ಕೊಳಗಾಗಿದೆ. ಆದರೆ, ಅದು ಇದೀಗ ಆತ್ಮನಿರ್ಭರ ಭಾರತದ ಸ್ಫೂರ್ತಿಯ ಮೂಲವಾಗಬಲ್ಲದು. ಸ್ವಾತಂತ್ರ್ಯಾನಂತರ ಖಾದಿಯನ್ನು ಕಡೆಗಣಿಸಲಾಗಿದೆ. ಹೀಗಾಗಿ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾದಿ ಎಳೆಯು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾದಂತೆ ಇದೀಗ ದೇಶದ ಬೆಳವಣಿಗೆ ಮತ್ತು ಆತ್ಮನಿರ್ಭರ ಭಾರತಕ್ಕೂ ಸ್ಫೂರ್ತಿಯ ಸೆಲೆಯಾಗಬಲ್ಲದು. ಖಾದಿ ಉತ್ಸವದಲ್ಲಿ ಸುಮಾರು 7,500 ಮಹಿಳೆಯರು ಏಕಕಾಲಕ್ಕೆ ಚರಕದಲ್ಲಿ ನೂಲುವ ಮೂಲಕ ದಾಖಲೆ ಬರೆದಿದ್ದಾರೆ ಎಂದು ಹೇಳಿದರು. ಖಾದಿ ಸ್ವಾತಂತ್ರ್ಯ ಚಳವಳಿಯ ಶಕ್ತಿಯಾಗಿ ಮಾರ್ಪಟ್ಟಿದೆ ಮತ್ತು ಗುಲಾಮಗಿರಿಯ ಸರಪಳಿಗಳನ್ನು ಮುರಿದುಬಿಟ್ಟಿದೆ ಎಂಬುದನ್ನು ನಾವು ನೋಡಿದ್ದೇವೆ. ಅದೇ ಖಾದಿ ಭಾರತವನ್ನು ಅಭಿವೃದ್ಧಿಪಡಿಸಲು ಮತ್ತು ಸ್ವಾವಲಂಬಿಯಾಗಿಸಲು ಸ್ಫೂರ್ತಿಯಾಗಬಲ್ಲದು. 75 ವರ್ಷಗಳ ಸಂದರ್ಭದಲ್ಲಿ. ಸ್ವಾತಂತ್ರ್ಯದ ಸಮಯದಲ್ಲಿ, 7,500 ಸಹೋದರಿಯರು ಮತ್ತು ಹೆಣ್ಣುಮಕ್ಕಳು ಚರಕದ ಮೇಲೆ ನೂಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಚರಕ ನೂಲು ನನ್ನನ್ನು ನನ್ನ ಬಾಲ್ಯದ ದಿನಗಳಿಗೆ ಕರೆದೊಯ್ಯಿತು ಎಂದರು.