ಶಿವಮೊಗ್ಗ: ಸಂಸದ ಪ್ರಜ್ವಲ್ ರೇವಣ್ಣ 'ಅಶ್ಲೀಲ ವಿಡಿಯೋ' ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಿಎಂ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದರು.
ಎಎನ್‌ಐ ಜತೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, "ನಾನು ಈ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ... ವಿಚಾರಣೆ ನಡೆಯುತ್ತಿದೆ ಮತ್ತು ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ. ಅದು ನಮ್ಮ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಹೇಳಿದರು.
ಈ ವಿಷಯದ ಕುರಿತು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿಯನ್ನು ಉಲ್ಲೇಖಿಸಿದ ಅವರು, "ಇದು ಮೂರ್ಖತನ, ಯಾವ ರೀತಿಯಲ್ಲಿ ಪ್ರಧಾನಿ ಅಥವಾ ಬೇರೆ ಯಾರಾದರೂ ಹೊಣೆಗಾರರು? ವಿಚಾರಣೆ ಮುಗಿದ ನಂತರ ನಿರ್ದಿಷ್ಟ ವ್ಯಕ್ತಿ ನಿಜವಾಗಿಯೂ ಭಾಗಿಯಾಗಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ 3/4 ಸ್ಥಾನಗಳನ್ನು ಪಡೆಯುವುದಿಲ್ಲ ಎಂಬ ಭರವಸೆಯನ್ನು ಕಳೆದುಕೊಂಡಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲುತ್ತೇವೆ, ಬಿಜೆಪಿ ನೇತೃತ್ವದ ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್‌ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ಎದುರಿಸುತ್ತಿದ್ದಾರೆ.