Select Your Language

Notifications

webdunia
webdunia
webdunia
webdunia

ಲೋಕಾಯುಕ್ತರ ವಿರುದ್ಧ ದೂರು ದಾಖಲಾತಿಗೆ ಪೊಲೀಸರ ನಕಾರ: ಎಎಪಿಯಿಂದ ಧರಣಿ

ಲೋಕಾಯುಕ್ತರ ವಿರುದ್ಧ ದೂರು ದಾಖಲಾತಿಗೆ ಪೊಲೀಸರ ನಕಾರ: ಎಎಪಿಯಿಂದ ಧರಣಿ
ಬೆಂಗಳೂರು , ಸೋಮವಾರ, 29 ಜೂನ್ 2015 (12:18 IST)
ರಾಜ್ಯದ ವಿಶ್ವಾಸಾರ್ಹ ಸಂಸ್ಥೆ ಎಂದೇ ಖ್ಯಾತಿ ಪಡೆದಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಸ್ತುತ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್ ರಾವ್ ಅವರ ವಿರುದ್ಧ ರಾಜ್ಯದ ಆಪ್ ಕಾರ್ಯಕರ್ತರು ದೂರು ದಾಖಲಿಸಲು ಮುಂದಾಗಿದ್ದಾರೆ. 
 
 ಪ್ರಸ್ತುತ ನಗರದ ಹೈಗ್ರೌಂಡ್ ಠಾಣೆಯ ಎದುರು ಜಮಾಯಿಸಿರುವ ಕಾರ್ಯಕರ್ತರು, ಮುಖ್ಯ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅವರು ತಮ್ಮ ನಿವಾಸದಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದು, ಅವರ ಪುತ್ರ ಅಶ್ವಿನ್ ರಾವ್ ಅವರು ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಒಂದು ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಪ್ರಕರಣದಲ್ಲಿ ಭಾಸ್ಕರ್ ರಾವ್ ಅವರೂ ಕೂಡ ಭಾಗಿಯಾಗಿರುವ ಸಂಶಯವಿದೆ. ಅಲ್ಲದೆ ಈ ಹಿಂದೆ ಕೆಲ ಭ್ರಷ್ಟರ ಬಗ್ಗೆ ಮಾಹಿತಿ ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೆವು. ಆದರೆ ಭ್ರಷ್ಟ ಅಧಿಕಾರಿಗಳೊಂದಿಗೇ ದೂರವಾಣಿ ಸಂಧಾನ ಮಾಡಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟು ಕೈ ಬಿಟ್ಟರು ಎಂದು ಆರೋಪಿಸಿರುವ ಕಾರ್ಯಕರ್ತರು, ಭಾಸ್ಕರ್ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. 
 
ಈ ಸಂಬಂಧ ಪೊಲೀಸರೂ ಕೂಡ ಪ್ರತಿಕ್ರಿಯಿಸಿದ್ದು, ಲೋಕಾಯುಕ್ತರ ವಿರುದ್ಧ ದೂರು ದಾಖಲಿಸಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಸಲಹೆ ಹಾಗೂ ಸೂಚನೆಗಳೊಂದಿಗೆ ದೂರು ದಾಖಲಿಸಿಕೊಳ್ಳುವುದೋ ಬೇಡವೋ ಎಂಬ ಬಗ್ಗೆ ನಿರ್ಧರಿಸುತ್ತೇವೆ ಎನ್ನುವ ಮೂಲಕ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. 
 
ಈ ಹಿನ್ನೆಲೆಯಲ್ಲಿ ತಮ್ಮ ಪಟ್ಟು ಬಿಡದ ಎಎಪಿ ಕಾರ್ಯಕರ್ತರು, ನ್ಯಾ.ಭಾಸ್ಕರ್ ರಾವ್ ಅವರ ವಿರುದ್ಧ ದೂರು ದಾಖಲಿಸಿಕೊಳ್ಳದೆ ನಾವು ಇಲ್ಲಿಂದ ತೆರಳುವುದಿಲ್ಲ. ಅಲ್ಲದೆ ರಾಜ್ಯಾದ್ಯಂತ ಇರುವ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ದೂರು ದಾಖಲಾಗುವವರೆಗೆ ನಿರಂತರ ಧರಣಿ ನಡೆಸಲಿದ್ದೇವೆ ಎಂದು ಧರಣಿ ಕುಳಿತಿದ್ದಾರೆ.   
 
ಇನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಹಾಗೂ ಅವರ ಸಂಬಂಧಿ ಆಂಧ್ರ ಮೂಲದ ಕೃಷ್ಣಾ ರಾವ್ ಅಲಿಯಾಸ್ ನರಸಿಂಹ ರಾವ್ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾ. ಭಾಸ್ಕರ್ ರಾವ್ ಅವರು ತಮ್ಮ ಅಧಿಕಾರ ಬಳಸಿ ಅದೇ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ತನಿಖೆ ನಡೆಸುವಂತೆ ಕಳೆದ ಶುಕ್ರವಾರ ಆದೇಶಿಸಿದ್ದರು. 
 
ಆದರೆ, ತಮ್ಮಿಂದ ಯಾವುದೇ ಸಲಹೆಗಳನ್ನು ಭಾಸ್ಕರ್ ರಾವ್ ಪಡೆದಿಲ್ಲ. ಅಲ್ಲದೆ ನನ್ನ ಅರಿವಿನವಲ್ಲಿರುವಂತೆ ಸಿಬಿಐ ಹಾಗೂ ಲೋಕಾಯುಕ್ತ ಸಂಸ್ಥೆಗಳು ಮಾತ್ರ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸಬಹುದಾಗಿದೆ. ಹೊರತುಪಡಿಸಿ ಸಿಸಿಬಿ ಪೊಲೀಸರಿಗೆ ಆ ಹಕ್ಕು ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದು ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಆರೋಪಿಸಿದ್ದರು. ಈ  ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ಷೇಪ ಕೇಳಿ ಬರುತ್ತಿದ್ದು, ಎಎಪಿ ಕಾರ್ಯಕರ್ತರೂ ಕೂಡ ಕೇಸು ದಾಖಲಿಸಲು ಮುಂದಾಗಿದ್ದಾರೆ. 

Share this Story:

Follow Webdunia kannada