Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆ ಆರೋಪ: ಮಹಿಳೆಯರ ಸೆರಗೆಳೆದು ಸಾರ್ವಜನಿಕವಾಗಿಯೇ ಥಳಿಸಿದ ಬೆಳಗಾವಿ ಪೊಲೀಸರು

ವೇಶ್ಯಾವಾಟಿಕೆ ಆರೋಪ: ಮಹಿಳೆಯರ ಸೆರಗೆಳೆದು ಸಾರ್ವಜನಿಕವಾಗಿಯೇ ಥಳಿಸಿದ ಬೆಳಗಾವಿ ಪೊಲೀಸರು
ಬೆಳಗಾವಿ , ಶನಿವಾರ, 5 ಸೆಪ್ಟಂಬರ್ 2015 (09:44 IST)
ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ ಎಂದು ಕೆಲ ವರ್ತಕರು ನೀಡಿದ ದೂರನ್ನು ಆಧರಿಸಿ ನಿನ್ನೆ ಆರೋಪಿ ಮಹಿಳೆಯರ ಮೇಲೆ ದಾಳಿ ನಡೆಸಿದ ನಗರದ ಕಡೆ ಬಜಾರ್ ಪೊಲೀಸರು, ಮಹಿಳೆಯರನ್ನು ಸಾರ್ವಜನಿಕವಾಗಿಯೇ ಮನಬಂದಂತೆ ಲಾಠಿಯಿಂದ ಥಳಿಸುವ ಮೂಲಕ ಖಾಕಿ ದರ್ಪವನ್ನು ಮೆರೆದಿರುವ ಘಟನೆ ನಗರದ ಗಣಪತಿ ಗಲ್ಲಿಯಲ್ಲಿ ನಿನ್ನೆ ನಡೆದಿದೆ.  
 
ಘಟನೆ ಹಿನ್ನೆಲೆ: ದೂರಿನ ಹಿನ್ನೆಲೆಯಲ್ಲಿ ಆಗಮಿಸಿದ ಪೊಲೀಸರು, ಐವರು ಮಹಿಳೆಯರನ್ನು ಬಂಧಿಸಲು ಯತ್ನಿಸಿದ್ದಾರೆ. ಆದರೆ ಮಹಿಳೆಯರು ಓಡಲು ಯತ್ನಿಸಿದಾಗ ಅವರನ್ನು ಹಿಡಿದು ನಡು ಬೀದಿಯಲ್ಲಿಯೇ ಲಾಠಿಯಿಂದ ಥಳಿಸಲು ಮುಂದಾಗಿದ್ದಾರೆ. ಈ ವೇಳೆ, ಚೀರಾಟ, ಗೋಳಾಟದಿಂದ ಕೈ ಮುಗಿದು ಬೇಡಿದರೂ ಕೂಡ ಬಿಡದ ಪೊಲೀಸರು, ಮನಬಂದಂತೆ ಥಳಿಸಿಹಾಕಿದ್ದಾರೆ. 
 
ಈ ಘಟನೆಯನ್ನು ಸ್ಥಳೀಯರೋರ್ವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಮಾಧ್ಯಮಗಳಿಗೆ ನೀಡಿದ್ದಾರೆ. ಆದ್ದರಿಂದ ಘಟನೆಯು ಪ್ರಸ್ತುತ ಎಲ್ಲಾ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿದ್ದು, ಪೊಲೀಸರ ದುರ್ವರ್ತನೆ ವಿರುದ್ಧ ಸಾರ್ವಜನಿಕರು ಆಖ್ರೋಶ ವ್ಯಕ್ತಪಡಿಸುತ್ತಿದ್ದಾರೆ.  
 
ವಿಡಿಯೋವನ್ನು ನೋಡಿದಲ್ಲಿ ಪೊಲೀಸರ ತಂಡದಲ್ಲಿ ಕೇವಲ ಓರ್ವ ಮಹಿಳಾ ಪೇದೆ ಇದ್ದು, ಇತರೆ ಪುರುಷ ಸಿಬ್ಬಂದಿಗಳೇ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಹಿಳೆಯರ ಸೀರೆ ಸೆರಗನ್ನು ಎಳೆದು ಥಳಿಸಿರುವ ಪುರುಷ ಮಂದಿ ಪೊಲೀಸರು, ಆ ಮೂಲಕ ತಮ್ಮ ಖಾಕಿ ದರ್ಪ ತೋರಿಸಿದ್ದಾರೆ. ಇದು ಪ್ರಸ್ತುತ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಕಾನೂನು ಪರಿಪಾಲಕರೇ ಕಾನೂನನ್ನು ಉಲ್ಲಂಘಿಸುತ್ತಿರುವಾಗ ನ್ಯಾಯ ಕೇಳುವುದಾದರೂ ಯಾರಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 
ಕೊನೆಗೂ ಐವರು ಮಹಿಳೆಯರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 
 
ಮಹಿಳಾ ಪೇದೆಯ ಕೊರತೆ ಇದ್ದಲ್ಲಿ ಬಂಧಿಸಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಮಹಿಳೆಯರನ್ನು ಸಾರ್ವಜನಿಕವಾಗಿ ಥಳಿಸುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

Share this Story:

Follow Webdunia kannada