ಬೆಂಗಳೂರು: ಮಾಜಿ ಸಿಎಂ ಹಾಗೂ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಇದೀಗ ಮತ್ತೇ ಚರ್ಚೆಯಾಗುತ್ತಿದೆ. ಇದಕ್ಕೆಲ್ಲ ಕಾರಣ ಸಂತ್ರಸ್ಥೆಯ ಸಹೋದರನ ವಿಡಿಯೋ ಹೇಳಿಕೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿರುವ ವ್ಯಕ್ತಿ ಬಿಎಸ್‌ವೈ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ತನ್ನ ಸಹೋದರಿ ತನಗಾದ ಚಿತ್ರಹಿಂಸೆಯಿಂದಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾಳೆ ಎಂದು ನೋವು ತೋಡುಕೊಂಡಿದ್ದಾರೆ.
ಅತೀವ ದುಃಖದಿಂದ ನಾನು ಇಂದು ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಪುಟ್ಟ ತಂಗಿ ಮೇಲಾದ ದೌರ್ಜನ್ಯದಿಂದಾಗಿ ನನ್ನ ಕುಟುಂಬ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ನಿಜಕ್ಕೂ ಯಡಿಯೂರಪ್ಪ ರಂತಹವರು ಇಂತಹ ಕೃತ್ಯವೆಸಗುತ್ತಾರೆಂದು ಊಹಿಸಲೂ ಅಸಾಧ್ಯ. ಅದೂ ಕೂಡ ಅವರ ಮೊಮ್ಮಕ್ಕಳಿಗಿಂತಲೂ ಚಿಕ್ಕವಳಾದ ನನ್ನ ಪುಟ್ಟ ತಂಗಿ ಮೇಲೆ ಇಂತಹ ಕೃತ್ಯ ನಡೆಸಿದ್ಜಾರೆ. ನನಗೆ ಮತ್ತು ನನ್ನ ಪುಟ್ಟ ತಂಗಿಗೆ ಇದು ನಿಜಕ್ಕೂ ಆಘಾತವಾಗಿದೆ.'
ನನ್ನ ಪುಟ್ಟ ತಂಗಿ ತನ್ನ ಮೇಲಾದ ದೌರ್ಜನ್ಯದಿಂದಾಗಿ ನಿತ್ಯ ನರಕ ಅನುಭವಿಸುತ್ತಿದ್ದಾಳೆ. ಅಂದು ನಡೆದ ಕೆಟ್ಟ ಘಟನೆಗಳು ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಇದೇ ಕೆಟ್ಟ ಘಟನೆಗಳ ವಿರುದ್ಧ ಹೋರಾಡುತ್ತಿದ್ದ ನನ್ನ ತಾಯಿ ಕೂಡ ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಸಾವು ನಮಗೆ ಇನ್ನೂ ಆಘಾತ ತಂದಿದೆ. ನಮ್ಮ ಭಾವನೆಗಳು, ಆಕ್ರೋಶ ಎಲ್ಲವನ್ನೂ ನಮ್ಮೊಳಗೇ ಇಟ್ಟುಕೊಂಡು ಒದ್ದಾಡುವಂತೆ ಮಾಡಿದೆ. ನಮ್ಮ ತಾಯಿಯೇ ನಮ್ಮ ಧೈರ್ಯವಾಗಿದ್ದರು. ಆದರೆ ಅವರ ಸಾವು ನ್ಯಾಯಕ್ಕಾಗಿ ಹೋರಾಡುವ ನಮ್ಮ ಹಾದಿಯಲ್ಲಿ ನಮಗೆ ಭರಿಸಲಾರದ ನಷ್ಟ ತಂದಿದೆ. ಸುಮಾರು ಒಂದು ದಶಕದಿಂದ ಅಂದರೆ 2016ರಲ್ಲಿ ಮೊದಲ ಪೋಕ್ಸೋ ಪ್ರಕರಣ ದಾಖಲಾದ ದಿನದಿಂದಲೂ ಆಕೆ ಈ ಹೋರಾಟ ನಡೆಸಿದ್ದರು.
ನ್ಯಾಯಕ್ಕಾಗಿ ನಮ್ಮ ತಾಯಿ ವಿವಿಧ ನಾಯಕರನ್ನು, ಅಧಿಕಾರಿಗಳನ್ನು ಭೇಟಿಯಾದರು. ಆದರೆ ಆಕೆಗೆ ನ್ಯಾಯ ಕೊಡಿಸುವ ಬದಲು ಆಕೆಯ ವಿರುದ್ಧವೇ ಸುಳ್ಳು ಪ್ರಕರಣಗಳು ದಾಖಲಾದವು. ನಮ್ಮ ತಾಯಿ ವಿರುದ್ಧ ದಾಖಲಾದ ಯಾವುದೇ ಪ್ರಕರಣವೂ ಸತ್ಯವಲ್ಲ. ಅದೆಲ್ಲ ಸುಳ್ಳು ಪ್ರಕರಣಗಳು.. ಬಿಎಸ್ ಯಡಿಯೂರಪ್ಪರನ್ನು ರಕ್ಷಿಸಲು ನಮ್ಮ ತಾಯಿ ವಿರುದ್ಧ ಹಾಕಲಾದ ಸುಳ್ಳು ಪ್ರಕರಣಗಳು ಅವು ಎಂದು ಆರೋಪಿಸಿದ್ದಾರೆ.