ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿಚಾರ ಇಂದು ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಮತ್ತು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಘಟನೆ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ವಿಧಾನಪರಿಷತ್ ನಲ್ಲಿ ಕೋಟಾ ಶ್ರೀನಿವಾಸ್ ವಿಷಯ ಪ್ರಸ್ತಾಪಿಸುತ್ತಿದ್ದಂತೇ ಮಧ್ಯಪ್ರವೇಶಿಸಿದ ಸಚಿವ ಎಚ್.ಕೆ. ಪಾಟೀಲ್, ಪಾಕ್ ಪರ ಯಾರೂ ಘೋಷಣೆ ಕೂಗಿಲ್ಲ. ಇಂತಹದ್ದೊಂದು ವಿಷಯವನ್ನು ಸುಳ್ಳು ಸೃಷ್ಟಿ ಮಾಡಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಆದರೆ ಇದು ಬಿಜೆಪಿ ಸದಸ್ಯರನ್ನು ತೀವ್ರ ಕೆರಳಿಸಿತು. ಎರಡೂ ಸದಸ್ಯರ ಗದ್ದಲದಿಂದಾಗಿ ಸಭಾಪತಿ ಹೊರಟ್ಟಿ ಸದನ ಮುಂದೂಡಬೇಕಾಯಿತು.
ಇನ್ನೊಂದೆಡೆ ವಿಧಾನಸಭೆಯಲ್ಲೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಘಟನೆ ಬಗ್ಗೆ ಪ್ರಸ್ತಾಪಿಸಿದಾಗ ಕಾಂಗ್ರೆಸ್ ಸದಸ್ಯರಾದ ಪ್ರಿಯಾಂಕ್ ಖರ್ಗೆ, ಜಮೀರ್ ಅಹಮ್ಮದ್ ಮುಂತಾದವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇಂತಹವರಿಗೆ ರೆಡ್ ಕಾರ್ಪೆಟ್ ಹಾಕಿ ಸದನಕ್ಕೆ ಬರಲು ಅವಕಾಶ ಕೊಟ್ಟಿದ್ದು ಯಾರು? ಅವರನ್ನು ವೆಹಿಕಲ್ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟವರು ಯಾರು ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಈ ವೇಳೆ ಸ್ಪೀಕರ್ ಎರಡೂ ಕಡೆಯ ಸದಸ್ಯರನ್ನು ಸುಮ್ಮನಾಗಿಸಲು ಹರಸಾಹಸ ಪಡಬೇಕಾಯಿತು. ಆದರೆ ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೇ ಕೂತಿದ್ದು ಕಂಡುಬಂತು.