Select Your Language

Notifications

webdunia
webdunia
webdunia
webdunia

ಮಹಾ ನಿರ್ದೇಶಕ ಸ್ಥಾನದಿಂದ ಪಚಾವೋ ನಿವೃತ್ತಿ: ಭಾಷಣ

ಮಹಾ ನಿರ್ದೇಶಕ ಸ್ಥಾನದಿಂದ ಪಚಾವೋ ನಿವೃತ್ತಿ: ಭಾಷಣ
ಬೆಂಗಳೂರು , ಶನಿವಾರ, 28 ಫೆಬ್ರವರಿ 2015 (12:34 IST)
ಎಟಿಎಂನಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣ ಹಾಗೂ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವುದು ನನ್ನ ಸೇವಾವಧಿಯಲ್ಲಿನ ಅತ್ಯಂತ ಸವಾಲಿನ ಕರ್ತವ್ಯಗಳಾಗಿದ್ದವು ಎಂದೆನಿಸುತ್ತದೆ ಎಂದು ನಿವೃತ್ತಿಯಾಗುತ್ತಿರುವ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮ್ ಪಚಾವೋ ಅಭಿಪ್ರಾಯ ವ್ಯಕ್ತಪಡಿಸಿದರು.
 
ನಗರದ ಕೋರಮಂಗಲದಲ್ಲಿನ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಸೇವಾ ಬೀಳ್ಕೊಡುಗೆ ಕವಾಯತಿನಲ್ಲಿ ಭಾಗ ವಹಿಸಿದ್ದ ಅವರು, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಈ ವೇಳೆ, ಪೊಲೀಸ್ ಮುಖ್ಯಸ್ಥನಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧದಂತಹ ಕೃತ್ಯಗಳನ್ನು ನಿಯಂತ್ರಿಸುವುದು ನನ್ನ ಮುಖ್ಯ ಜವಾಬ್ದಾರಿಯಾಗಿತ್ತು. 2 ವರ್ಷ 9ತಿಂಗಳು ನಡೆಸಿದ ನನ್ನ ಸೇವೆಯಲ್ಲಿ ನನಗೆ ತೃಪ್ತಿ ಇದೆ. 
 
ನೈತಿಕ ಪೊಲೀಸ್ ಗಿರಿ ನಿಯಂತ್ರಣ, ಭೂಗತ ಲೋಕದ ಚಟುವಟಿಕೆಗಳು ಹಾಗೂ ದಾಳಿ ಸೇರಿದಂತೆ ಇನ್ನಿತರೆ ಪ್ರಕರಣಗಳು ಪೊಲೀಸರನ್ನು ಎಚ್ಚರದಿಂದ ಇರುವಂತೆ ಮಾಡಿವೆ. ಮಲ್ಲೇಶ್ವರಂನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅಂತೆಯೇ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳ ಬಂಧನ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕಱಣದ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಅದೇ ರೀತಿ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವೂ ಅತ್ಯಂತ ಸವಾಲಿನದ್ದಾಗಿದೆ. ಇವುಗಳನ್ನು ಬೇಧಿಸುವಲ್ಲಿ ನಮ್ಮ ಇಲಾಖೆ ಸಫಲವಾಗಲಿದೆ ಎಂದು ಪಚಾವೋ ವಿಶ್ವಾಸ ವ್ಯಕ್ತಪಡಿಸಿದರು. 
 
ಇವೆಲ್ಲವುಗಳ ಜೊತೆಗೆ ವಿಧಾನಸಭೆ, ಲೋಕಸಭೆ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ. ಆದರೆ, ಸಾಮೂಹಿಕ ಅತ್ಯಾಚಾರ ಹಾಗೂ ಶಾಲಾ ಆವರಣದಲ್ಲಿ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಅತ್ಯಂತ ಹೀನ ಕೃತ್ಯಗಳಾಗಿ ಕಂಡು ಬಂದವು. ಆದರೆ ಇವುಗಳನ್ನು ತಡೆಯುವಲ್ಲಿ ಇಲಾಖೆ ಇಂದಿಗೂ ಶ್ರಮಿಸುತ್ತಿದೆ. ಅಲ್ಲದೆ ಅದು ಒಂದು ಸವಾಲಿನ ಕೆಲಸವಾಗಿತ್ತು. 
 
ಇನ್ನು ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಇತರೆ ಗಣ್ಯರು ನಮ್ಮ ಕರ್ತವ್ಯಕ್ಕೆ ತುಂಬಾ ಬೆಂಬಲ ನೀಡಿದ್ದರು. ಅದರ ಜೊತೆಗೆ ಇಳಾಖೆಯ ಅಧಿಕಾರಿಗಳೂ ಕೂಡ ನಿಷ್ಠಾವಂತರಾಗಿ ಕೆಲಸ ನಿರ್ವಹಿಸಲು ಸಹಕರಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ರಾಜ್ಯ ಪೊಲೀಸ್ ಇಲಾಖೆ ಉತ್ತಮ ಸ್ಥಿತಿಯಲ್ಲಿದ್ದು ನೂತನ ಡಿಜಿ ಅವರ ನೇತೃತ್ವದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದರು. ಬೀಳ್ಕೊಡುಗೆ ಸಮಾರಂಭದಲ್ಲಿ ಇಲಾಖೆಯ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
 

Share this Story:

Follow Webdunia kannada