ನಾಲ್ಕು ಶತಮಾನಗಳನ್ನು ಸವೆಸಿ ಐದನೇ ಶತಮಾನದತ್ತ ಸಾಗುತ್ತಿರುವ ಮೈಸೂರು ದಸರಾ ಪ್ರತಿವರ್ಷವೂ ಹಲವು ಹೊಸತನಗಳನ್ನು ತನ್ನೊಡಲಲ್ಲಿ ಸೇರಿಸಿಕೊಂಡು ಅದ್ಧೂರಿತನವನ್ನು ಇಮ್ಮಡಿ ಮಾಡಿಕೊಂಡು ಮುಂದೆ ಸಾಗುತ್ತಿದೆ. ಆಳರಸರ ಕಾಲದ ದಸರಾ ಇವತ್ತು ಸಾಂಸ್ಕೃತಿಕ ಸಂಗಮವಾಗಿ ನಾಡಹಬ್ಬವಾಗಿ ಪ್ರಜ್ವಲಿಸುತ್ತಿದೆ.
ದಸರಾದ ಬಗ್ಗೆ ಅಧ್ಯಯನ ಮಾಡಿ ಡಾ. ವಿ. ರಂಗನಾಥ್ ಪಿಹೆಚ್‌ಡಿ ಪದವಿಪಡೆದಿರುವುದು ವಿಶೇಷವಾಗಿದೆ.
ದಸರೆಗೆ ಪೌರಾಣಿಕ ಮತ್ತು ಐತಿಹಾಸಿಕ ಎರಡರ ಬೆಸುಗೆಯಿದೆ. ಇವತ್ತಿಗೂ ದಸರೆಯನ್ನು ಹಲವೆಡೆ ಆಚರಿಸಲಾಗುತ್ತಿದೆಯಾದರೂ ಅಲ್ಲಿನ ಆಚರಣೆಗೂ ಮೈಸೂರಿನಲ್ಲಿ ಆಚರಿಸಲ್ಪಡುವ ದಸರೆಗೂ ಭಿನ್ನತೆ ಮತ್ತು ವಿಶಿಷ್ಟತೆ ಕಂಡು ಬರುತ್ತದೆ. ಇಲ್ಲಿನ ದಸರೆಯಲ್ಲಿ ಸಂಪ್ರದಾಯದ ಲೇಪನದೊಂದಿಗೆ ರಾಜಪಾರಂಪರ್ಯದ ವೈಭವ, ಇತಿಹಾಸದ ಮೇಳೈಕೆ ಸಾಂಸ್ಕೃತಿಕ ಉತ್ಸವವಾಗಿ ಗಮನಸೆಳೆಯುತ್ತಿದೆ.