Select Your Language

Notifications

webdunia
webdunia
webdunia
webdunia

ಮೃತ ರೈತರಿಗೆ ಸಂತಾಪ ಸೂಚಿಸಲು ಪ್ರತಿಪಕ್ಷಗಳ ಮನವಿ

ಮೃತ ರೈತರಿಗೆ ಸಂತಾಪ ಸೂಚಿಸಲು ಪ್ರತಿಪಕ್ಷಗಳ ಮನವಿ
ಬೆಳಗಾವಿ , ಮಂಗಳವಾರ, 30 ಜೂನ್ 2015 (12:55 IST)
ಇಲ್ಲಿನ ಸುವರ್ಣಸೌಧದಲ್ಲಿ ಎರಡನೇ ದಿನವಾದ ಇಂದು ಮುಂಗಾರು ಅಧಿವೇಶನ ಮುಂದುವರಿದಿದ್ದು, ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತರಿಗೆ ಸಂತಾಪ ಸೂಚಿಸುವಂತೆ ಸರ್ಕಾರಕ್ಕೆ ಪ್ರತಿಪಕ್ಷಗಳು ತಾಕೀತು ಮಾಡಿದವು. 
 
ಸದನದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಕಬ್ಬು ಬೆಳೆ ಪಡದೂ ಕೂಡ ಬಾಕಿ ಹಣ ವಾಪಾಸಾತಿ ಮಾಡಿಲ್ಲ ಎಂದು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಮೃತ ಅನ್ನದಾತನನ್ನು ಸದನದಲ್ಲಿ ನೆನಪಿಸಿಕೊಂಡು ಸಂತಾಪ ಸೂಚಿಸಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸದನದಲ್ಲಿ ಸರ್ಕಾರ ಸಂತಾಪ ಸೂಚಿಸಬೇಕು. ಅದು ಸರ್ಕಾರದ ಕರ್ತವ್ಯ ಕೂಡ ಎಂದು ಸರ್ಕಾರವನ್ನು ಒತ್ತಾಯಿಸಿದರು. 
 
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು, ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ಕಬ್ಬು ಬೆಳೆಗಾರರಿಗೆ ಸರ್ಕಾರದ ವತಿಯಿಂದ ಸಂತಾಪ ಸೂಚಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿಗಳಿಂದ ಸೂಕ್ತ ಮಾಹಿತಿ ತರಿಸಿಕೊಂಡು ಮುಂದಿನ ಕ್ರಮಕ್ಕೆ ಸರ್ಕಾರ ಮುಂದಾಗಲಿದೆ ಎಂಬ ಭರವಸೆ ನೀಡಿದರು. 
 
ಬಳಿಕ ಮಾತನಾಡಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಸರ್ಕಾರ ಮಾತ್ರ ಯಾವುದೇ ರೀತಿಯ ಕ್ರಮ ಅಥವಾ ಸಮೀಕ್ಷೆ ನಡೆಸಲು ಮುಂದಾಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಗೆ ಎಷ್ಟು ಬೆಲೆ ಇದೆ, ರೈತರು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಿದ್ದಾರೆ, ಕಾರಣವೇನು ಎಂಬ ಬಗ್ಗೆ ಸರ್ಕಾರ ಸಮೀಕ್ಷೆ ಮೂಲಕ ತಿಳಿದು ಕೊಳ್ಳಬೇಕು ಎಂದು ಒತ್ತಾಯಿಸಿದರು. 
 
ಇನ್ನು ಇದೇ ವೇಳೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕೂಡ ಪ್ರತಿಕ್ರಿಯಿಸಿ, ಅವರ ಅವಧಿಯಲ್ಲಿ ಅಷ್ಟು ಆತ್ಮಹತ್ಯೆಯಾಯಿತು, ಇವರ ಅವಧಿಯಲ್ಲಿ ಇಷ್ಟು, ನಮ್ಮ ಅವಧಿಯಲ್ಲಿ ಇಷ್ಟೇ ಎಂಬ ಅರ್ಥಹೀನ ಚರ್ಚೆ ಬೇಡ. ಪ್ರಸ್ತುತ ರೈತನ ಸಮಸ್ಯೆಯನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಇದು ರೈತನ ಆತ್ಮಹತ್ಯೆಯಲ್ಲ ಇಡೀ ದೇಶದ ಕೃಷಿಯ ಸಾವು ಎನ್ನುವ ಮೂಲಕ ಬೇಸರ ವ್ಯಕ್ತಪಡಿಸಿದರು. 

Share this Story:

Follow Webdunia kannada