ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ವಿರೋಧ ವ್ಯಕ್ತಪಡಿಸಿದೆ. ಸರ್ಕಾರ ಇಂತಹ ತೀರ್ಮಾನ ಕೈಗೊಂಡಿರುವುದರಿಂದ ಸಾಕಷ್ಟು ಸಮಸ್ಯೆ ಉದ್ಭವಿಸಲಿದೆ. ಈ ಆದೇಶ ರದ್ದುಗೊಳಿಸಬೇಕು ಎಂದು ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿರುವ ಇಂತಹ ಸಮಯದಲ್ಲಿ ಏಕಾಏಕಿ ವಯೋಮಿತಿ ಬದಲಾವಣೆ ಮಾಡಿದರೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ಹಿಂದೆ ಎಲ್ಕೆಜಿಗೆ 3 ವರ್ಷ 5 ತಿಂಗಳ ವಯಸ್ಸು ನಿಗದಿಪಡಿಸಲಾಗಿತ್ತು. ಒಂದನೇ ತರಗತಿಗೆ 5 ವರ್ಷ 5 ತಿಂಗಳಿನಿಂದ 7 ವರ್ಷಗಳ ವಯೋಮಿತಿ ಇತ್ತು. ಈ ನಿಯಮಗಳನ್ನು ಶಾಲೆಗಳು ಪಾಲಿಸಿಕೊಂಡು ಬರುತ್ತಿವೆ.ಆದರೆ, ಈಗ ದಾಖಲಾಗಿರುವ ಮಕ್ಕಳನ್ನು ಅದೇ ತರಗತಿಯಲ್ಲಿ ಮುಂದುವರೆಸಬೇಕೇ ಅಥವಾ ಹಿಂದಿನ ತರಗತಿಗಳಿಗೆ ಪುನರ್ ದಾಖಲಾತಿ ಮಾಡಬೇಕೇ ಎಂಬ ಗೊಂದಲ ಎದುರಾಗಿದೆ. ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸಿ ಗೊಂದಲ ಉಂಟು ಮಾಡುತ್ತಿದೆ. ಕೂಡಲೇ ಸರ್ಕಾರ ಹೊಸ ಆದೇಶವನ್ನು ಹಿಂಪಡೆದು ಗೊಂದಲ ಪರಿಹರಿಸುವಂತೆ ತಾಳಿಕಟ್ಟೆ ಪತ್ರ ಬರೆದು ಆಗ್ರಹಿಸಿದ್ದಾರೆ.