Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಹೇಳಿಕೆ ವಿರೋಧಿಸಿ ಪ್ರತಿಪಕ್ಷ ನಾಯಕರಿಂದ ಗದ್ದಲ

ಪ್ರಧಾನಿ ಮೋದಿ ಹೇಳಿಕೆ ವಿರೋಧಿಸಿ ಪ್ರತಿಪಕ್ಷ ನಾಯಕರಿಂದ ಗದ್ದಲ
ನವದೆಹಲಿ , ಮಂಗಳವಾರ, 28 ಏಪ್ರಿಲ್ 2015 (13:20 IST)
ಇತ್ತೀಚೆಗೆ ವಿದೇಶ ಪ್ರವಾಸ ಕೈಗೊಂಡಿದ್ದಾಗ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆ ವಿರುದ್ಧ ರಾಜ್ಯಸಭೆಯಲ್ಲಿ ಇಂದು ವಿರೋಧ ವ್ಯಕ್ತವಾಗಿದ್ದು, ವಿಷಯ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿ ಪಕ್ಷಗಳು ಪಟ್ಟು ಹಿಡಿದ ಘಟನೆ ನಡೆಯಿತು. 
 
ಸದನದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್ ನಾಯಕ ಅನಿಲ್ ಶರ್ಮಾ, ಪ್ರಧಾನಿ ಭಾರತದ ಪರವಾಗಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದು, ಅಲ್ಲಿ ಭಾರತದ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಇಂದು ನಡೆಯಬೇಕಿರುವ ಪ್ರಶ್ನೋತ್ತರ ವೇಳೆಯನ್ನು ರದ್ದುಗೊಳಿಸಿ ವಿಷಯದ ಚರ್ಚೆಗೆ ಅವಕಾಶ ಮಾಡಕೊಡಬೇಕೆಂದು ನಿಲುವಳಿ ಸೂಚನೆಯನ್ನು ಮಂಡಿಸಿದರು. 
 
ನಾಯಕ ಅನಿಲ್ ಅವರ ನಿಲುವಳಿಗೆ ವಿರೋಧ ಪಕ್ಷಗಳಾದ ಸಮಾಜವಾದಿ ಪಾರ್ಟಿ, ತೃಣಮೂಲ ಕಾಂಗ್ರೆಸ್ ಹಾಗೂ ಎಐಎಡಿಎಂಕೆ ಪಕ್ಷಗಳ ಎಲ್ಲಾ ಸದಸ್ಯರೂ ಕೂಡ ಬೆಂಬಲ ಸೂಚಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ನಿಮಗೆ ರಾಷ್ಟ್ರದಲ್ಲಿ ಭ್ರಷ್ಟಾಚಾರ ಆಗುವಾಗ ಯಾವುದೂ ಕಾಣುವುದಿಲ್ಲ. ಹೇಳಿಕೆ ನೀಡಿದರೆ ಮಾತ್ರ ನಿಮಗೆ ಕಳಂಕವೇ ಎನ್ನುವ ಮೂಲಕ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಳಿಕ ಸದನದಲ್ಲಿ ಗದ್ದಲ ಏರ್ಪಟ್ಟಿತು. ಇದರಿಂದ ಸದನದಲ್ಲಿ ನಡೆಯಬೇಕಿದ್ದ ಪ್ರಶ್ನೋತ್ತರ ಕಲಾಪಕ್ಕೆ ಅಡ್ಡಿಯಾಯಿತು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಸದನವನ್ನು ಮುಂದೂಡಿದರು.  
 
ಪ್ರಕರಣದ ಹಿನ್ನೆಲೆ: ಕಳೆದ ತಿಂಗಳಿನಲ್ಲಿ ಪ್ರಧಾನಿ ಮೋದಿ ಅವರು ಜರ್ಮನಿ ಹಾಗೂ ಕೆನಡಾ ದೇಶಗಳಿಗೆ ಭೇಟಿ ನೀಡಿ ಭಾರತ ಪರವಾಗಿ ಭಾಷಣ ಮಾಡಿದ್ದರು. ಈ ವೇಳೆ ನಾನು ಇಂದು ದೇಶದ ಪ್ರಧಾನಿಯಾಗಿದ್ದು, ಕಳೆದ 60 ವರ್ಷಗಳಲ್ಲಿ ದೇಶಕ್ಕೆ ಅಂಟಿಕೊಂಡಿರುವ ಕೊಳೆಯನ್ನು ಸಂಪೂರ್ಣವಾಗಿ ತೊಳೆಯುತ್ತಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ವಿರುದ್ಧ ಇಂದು ರಾಜ್ಯಸಭೆಯ ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ಚಕಾರವೆತ್ತಿ ಈ ವಿಚಾರ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದರು.  

Share this Story:

Follow Webdunia kannada