Select Your Language

Notifications

webdunia
webdunia
webdunia
webdunia

16 ವರ್ಷಗಳ ಬಳಿಕ ಒಕ್ಕಲಿಗ ನಾಯಕರ ಭೇಟಿ: ಕೃಷ್ಣ-ಗೌಡರ ಹಸ್ತಾಲಾಘವ

16 ವರ್ಷಗಳ ಬಳಿಕ ಒಕ್ಕಲಿಗ ನಾಯಕರ ಭೇಟಿ: ಕೃಷ್ಣ-ಗೌಡರ ಹಸ್ತಾಲಾಘವ
ಬೆಂಗಳೂರು , ಮಂಗಳವಾರ, 30 ಜೂನ್ 2015 (14:13 IST)
ರಾಜ್ಯದ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿ ಹೊರಹೊಮ್ಮಿ ತಮ್ಮದೇ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡು ಪ್ರಭಾವಿ ವ್ಯಕ್ತಿಯಾಗಿದ್ದ ಕಾಂಗ್ರೆಸ್ ಪಕ್ಷದ ಮಾಜಿ ವಿದೇಶಾಂಗ ಸಚಿವ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ನಗರದ ಕುವೆಂಪು ಕಲಾಕ್ಷೇತ್ರದಲ್ಲಿ 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿದ್ದು, ಅಚ್ಚರಿ ಮೂಡಿಸಿದ್ದಾರೆ.  
 
ರಾಜ್ಯ ಒಕ್ಕಲಿಗರ ಸಂಘ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಇಬ್ಬರೂ ನಾಯಕರು ಪರಸ್ಪರವಾಗಿ ಹಸ್ತಾಲಾಘವ ಮಾಡಿಕೊಳ್ಳುವ ಮೂಲಕ ಕುಶಲೋಪರಿ ವಿಚಾರಿಸಿಕೊಂಡರು. ಅಲ್ಲದೆ ಇದೇ ವೇಳೆ ಮಾತನಾಡಿದ ದೇವೇಗೌಡರು, ಇನ್ನೆಷ್ಟು ದಿನ ಬದುಕಿರುತ್ತೇವೋ ಗೊತ್ತಿಲ್ಲ. ಆದರೆ ಎಸ್.ಎಂ.ಕೃಷ್ಣ ಅವರು ನೂರು ವರ್ಷಗಳ ಕಾಲ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು. 
 
ಇನ್ನು 1999ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತ್ತು. ಪರಿಣಾಮ ಎಸ್.ಎಂ.ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಜೆಡಿಎಸ್ ಚುನಾವಣೆಯಲ್ಲಿ ಸೋತು ಮಕಾಡೆ ಮಲಗಿದ ಕಾರಣ ದೇವೇಗೌಡರಲ್ಲಿ ಕೊಂಚ ವಿರಸ ಉಂಟಾಗಿತ್ತು. ಆದರೂ ಸಿಎಂ ಸ್ಥಾನದ್ಲಲಿದ್ದ ಎಸ್.ಎಂ.ಕೃಷ್ಣ ಅವರಿಗೆ ಶುಭ ಹಾರೈಸಲು ಅಂದು ದೇವೇಗೌಡರು ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಅದನ್ನು ಹೊರತು ಪಡಿಸಿದರೆ ಇಂದು ಮತ್ತೆ ಭೇಟಿಯಾಗಿದ್ದು, ಪ್ರಸ್ತುತ 16 ವರ್ಷಗಳು ಉರುಳಿವೆ.  
 
ಇನ್ನು ಈ ಇಬ್ಬರೂ ನಾಯಕರ ಭೇಟಿ ಪ್ರಸ್ತುತ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಕುತೂಹಲ ಕೆರಳಿಸಿದೆ. ಕಳೆದ ಹಲವು ದಿನಗಳಿಂದ ಎಸ್.ಎಂ.ಕೃಷ್ಣ ಅವರನ್ನು ಮೂಲೆ ಗುಂಪು ಮಾಡಿದ್ದ ರಾಜ್ಯ ಕಾಂಗ್ರೆಸ್ ನಾಯಕರು, ಪ್ರಸ್ತುತ ಮತ್ತೆ ಕೃಷ್ಣ ಅವರತ್ತ ಮುಖ ಮಾಡಿ ಅವರ ಬೆಂಬಲಿಗರನ್ನು ಪಕ್ಷದತ್ತ ಸೆಳೆಯಲು ಯತ್ನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಇಬ್ಬರೂ ನಾಯಕರ ಇಂದಿನ ಭೇಟಿಯಾಗಿದೆ. 
 
ಇನ್ನು ಎಸ್.ಎಂ.ಕೃಷ್ಣ ಅವರು ದೇವೇಗೌಡರಿಗಿಂತ ಒಂದು ವರ್ಷ ಹಿರಿಯರಾಗಿದ್ದು, ಪ್ರಸ್ತುತ 83 ವರ್ಷಗಳನ್ನು ಪೂರೈಸಿದ್ದಾರೆ. ದೇವೇಗೌಡರು ಮೊನ್ನೆಯಷ್ಟೇ 83ನೇ ವಸಂತಕ್ಕೆ ಕಾಲಿರಿಸಿದ್ದಾರೆ. 

Share this Story:

Follow Webdunia kannada