ಬೆಂಗಳೂರು: ಕೋವಿಡ್ ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ಸಿಗುವುದಿಲ್ಲ ಎಂಬ ಆದೇಶ ಹೊರಡಿಸಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶವನ್ನು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ಕೊವೀಡ್ ಲಸಿಕೆ ಪಡೆಯದಿದ್ದರೆ ಪಡಿತರ ನೀಡುವುದಿಲ್ಲ ಅನ್ನೋದು ತಪ್ಪು, ಜನರ ಮನವೊಲಿಸಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಬೇಕೆಂದು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿದ್ದು, ವ್ಯಾಕ್ಸಿನೇಷನ್ ಪ್ರಮಾಣಪತ್ರ ತಂದ್ರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ಆದೇಶ ಹಲವು ಟೀಕೆಗಳಿಗೆ ಎಡೆಮಾಡಿಕೊಟ್ಟಿದೆ.
ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಚಾಮರಾಜನಗರದಲ್ಲಿ ಬಿಜೆಪಿ ಸರ್ಕಾರ ಹೇಳುತ್ತೆ ಕೋವಿಡ್ ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ಎರಡೂ ಇಲ್ಲ ಅಂತ. ಆದರೆ, ಲಸಿಕೆಗಳು ಜನಸಂಖ್ಯೆಗೆ ಸಾಕಾಗುವಷ್ಟು ಇವೆಯಾ? ಲಸಿಕೆ ಪಡೆಯುವಂತೆ ಜನರ ಮನವೊಲಿಸಿದ್ದಾರಾ? ಮೂಲ ಸೌಕರ್ಯಗಳಾದ ಆಹಾರ ಮತ್ತು ಪಿಂಚಣಿ ನೀಡುವುದಿಲ್ಲ ಅಂತ ಹೆದರಿಸುವುದು ಅಕ್ರಮ, ಅನೈತಿಕ ಹಾಗೂ ಅಸಾಂವಿಧಾನಿಕ. ಬಿಜೆಪಿ ಸರ್ಕಾರ ಹಾಗೂ ಚಾಮರಾಜನಗರ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಆಕ್ಸಿಜನ್ ಪೂರೈಸಲು ಅಸಮರ್ಥರಾಗಿ 36 ಅಮಾಯಕರ ಜೀವ ತೆಗೆದಿದ್ದಾರೆ. ಲಸಿಕೆ ಪಡೆಯದವರಿಗೆ ಶಿಕ್ಷಿಸಲು ಮುಂದಾಗಿರುವವರು ಮೊದಲು ಆಕ್ಸಿಜನ್, ಲಸಿಕೆ, ಪರೀಕ್ಷೆ ಹಾಗೂ ಮೃತರಿಗೆ ಸೂಕ್ತ ಪರಿಹಾರ ನೀಡದಿದ್ದಕ್ಕೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.