Select Your Language

Notifications

webdunia
webdunia
webdunia
webdunia

ಸಿಯಾಚಿನ್ ದುರಂತ: ಇಂದು ಹುತಾತ್ಮ ಯೋಧರ ಅಂತ್ಯಕ್ರಿಯೆ

ಸಿಯಾಚಿನ್ ದುರಂತ: ಇಂದು ಹುತಾತ್ಮ ಯೋಧರ ಅಂತ್ಯಕ್ರಿಯೆ
ಮೈಸೂರು , ಮಂಗಳವಾರ, 16 ಫೆಬ್ರವರಿ 2016 (09:12 IST)
ಸಿಯಾಚಿನ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಬಲಿಯಾಗಿದ್ದ ಯೋಧರಿಬ್ಬರ ಶವ ಹಲವು ದಿನಗಳ ನಿರೀಕ್ಷೆಯ ಬಳಿಕ ಕೊನೆಗೂ ತವರನ್ನು ತಲುಪಿದೆ ನಿನ್ನೆ ರಾತ್ರಿ ಮೈಸೂರಿನಲ್ಲಿ ಯೋಧ ಮಹೇಶ್‌ರ ಪಾರ್ಥಿವ ಶರೀರವನ್ನು ರಾತ್ರಿ 11.30ಕ್ಕೆ ಸಿಎಂ ಸಿದ್ದರಾಮಯ್ಯ ಬರಮಾಡಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಹಾಗೂ ಮೃತ ಯೋಧನ ತಾಯಿ ಸರ್ವಮಂಗಳ ಕೂಡ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.
 
ಪಾರ್ಥಿವ ಶರೀರವನ್ನು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಇರಿಸಲಾಗಿದ್ದು, ನಗರದಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಬೆಳಗ್ಗೆ 9 ಗಂಟೆಯಿಂದ ಹೆಚ್‌ಡಿ ಕೋಟೆಯಲ್ಲಿ  ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಮಹೇಶ್‌ ಅವರ ಹುಟ್ಟೂರಾದ ಕೆ.ಆರ್‌ ನಗರ ತಾಲೂಕಿನ ಪಶುಪತಿ ನಗರದಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ
 
ಹಾಸನ ಜಿಲ್ಲೆ ತೇಜೂರಿನ ನಿವಾಸಿ ಹುತಾತ್ಮ ಯೋಧ ನಾಗೇಶ್‌ ಅವರ ಪಾರ್ಥಿವ ಶರೀರ ಸಹ ನಿನ್ನೆ ರಾತ್ರಿ 12.30ರ ಸುಮಾರಿಗೆ ತವರಿಗೆ ತಲುಪಿದ್ದು ಶಾಸಕ ಹೆಚ್.ಎಸ್. ಪ್ರಕಾಶ್ ಮತ್ತು ಜಿಲ್ಲಾಧಿಕಾರಿ ಉಮೇಶ್ ಕುಸುಗಲ್  ಬರಮಾಡಿಕೊಂಡರು. ಬಳಿಕ ಪಾರ್ಥಿವ ಶರೀರವನ್ನು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿತ್ತು.
 
ಇಂದು ಮುಂಜಾನೆಯಿಂದ ಪಾರ್ಥಿವ ಶರೀರವನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, 9 ಗಂಟೆ ನಂತರ  ಹುಟ್ಟೂರಿಗೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ.
 
ಸಿದ್ದರಾಮಯ್ಯನವರು ಮೃತ ಯೋಧರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ್ದು, ಹುತಾತ್ಮರ ಕುಟುಂಬಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದಾರೆ. 

Share this Story:

Follow Webdunia kannada