ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ರಸ್ತೆಯೊಂದಕ್ಕೆ ನಾಮಕರಣ ಮಾಡಲು ಚಿಂತನೆ ನಡೆಸಿದ್ದು, ಇದಕ್ಕೆ ಆಕ್ಷೇಪ ನಾಗರಿಕರಿಂದ ವ್ಯಕ್ತವಾಗಿದೆ.
ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡಲು ಪಾಲಿಕೆ ಚಿಂತನೆ ನಡೆಸಿದೆ. ಅದಕ್ಕಾಗಿ ಪತ್ರಿಕಾ ಜಾಹಿರಾತು ಕೂಡ ನೀಡಿದೆ. ಕೆಆರ್‌ಎಸ್ ರಸ್ತೆಯಲ್ಲಿ ಹೆಚ್ಚಿನ ಆಸ್ಪತ್ರೆಗಳಿವೆ. ಹೀಗಾಗಿ, ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರು ಇಡಲು ಮುಂದಾಗಿದೆ.
ಆದರೆ, ಪಾಲಿಕೆಯ ಈ ನಿಲುವಿಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ನಾನು ಮಾಡಿರುವ ಆರೋಪದಲ್ಲಿ ಸಿದ್ದರಾಮಯ್ಯ ಎ1 ಆರೋಪಿ ಆಗಿದ್ದಾರೆ. ಅಂತಹ ಆರೋಪಿ ಹೆಸರನ್ನು ಮೈಸೂರಿನ ಪ್ರಮುಖ ರಸ್ತೆಗೆ ಇಡಲು ಹೊರಟಿರೋದು ವಿಷಾದನೀಯ ಎಂದು ಟೀಕಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿಗೆ ಅರಸರು ಕೊಟ್ಟಿರುವ ಕೊಡುಗೆ ಮನಗಾಣಬೇಕು. ಆ ರಸ್ತೆಯಲ್ಲಿ ಕೆಂಪಜಮಣಿ ಕ್ಷಯರೋಗ ಆಸ್ಪತ್ರೆ ಕೂಡ ಇದೆ. ಮೊದಲಿಂದ ಅದನ್ನು ಪಿ.ಕೆ.ಟಿ.ಬಿ ರಸ್ತೆ ಅಂತಲೇ ಕರೆಯುತ್ತಾರೆ. ಅಂತಹ ಐತಿಹಾಸಿಕ ರಸ್ತೆಗೆ ಗುರುತರ ಆರೋಪ ಹೊತ್ತಿರುವ ವ್ಯಕ್ತಿ ಹೆಸರಿಡುತ್ತಿರುವುದು ಸರಿಯಲ್ಲ. ಇದರ ವಿರುದ್ಧವೂ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಸಿದ್ದಾರೆ.