ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ಸೈಟು ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂದಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡುವ ಸಾಧ್ಯತೆಯಿದೆ.
ಈ ಬಗ್ಗೆ ಹೈಕೋರ್ಟ್ ನಲ್ಲಿ ಇಂದು ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ತೀರ್ಪು ಬರುವ ಸಾಧ್ಯತೆಯಿದೆ. ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಹೀಗಾಗಿ ತನಿಖೆಯನ್ನು ಸಿಬಿಐನಿಂದ ಮಾಡಿಸಿ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವೇಳೆ ಹೈಕೋರ್ಟ್ ಸಿಬಿಐ ತನಿಖೆಗೆ ಅಸ್ತು ಎಂದರೆ ಲೋಕಾಯುಕ್ತ ತನಿಖೆ ತಾನಾಗಿಯೇ ಕೊನೆಯಾಗಲಿದೆ. ಆಗ ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ. ಕೇಂದ್ರ ತನಿಖಾ ಸಂಸ್ಥೆ ಪ್ರಕರಣಕ್ಕೆ ಎಂಟ್ರಿ ಕೊಟ್ಟರೆ ಸಿದ್ದರಾಮಯ್ಯ ವಿರುದ್ಧ ಮುಡಾ ಉರುಳು ಮತ್ತಷ್ಟು ಬಿಗಿಯಾಗಲಿದೆ.
ಮುಡಾ ಕೇಸ್ ನಲ್ಲಿ ಸಿದ್ದರಾಮಯ್ಯ ಪತ್ನಿಯನ್ನು ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಗೌಪ್ಯ ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯರನ್ನು ಇದುವರೆಗೆ ವಿಚಾರಣೆ ನಡೆಸಿಲ್ಲ. ಇದೀಗ ಸಿದ್ದರಾಮಯ್ಯನವರಿಗೂ ತನಿಖೆಗೆ ಹಾಜರಾಗಲು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಅದರ ನಡುವೆ ಇಂದು ಹೈಕೋರ್ಟ್ ನೀಡಲಿರುವ ತೀರ್ಪು ಮುಖ್ಯವಾಗಲಿದೆ.