ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ಅವರನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಸಹಕರಿಸದ ಹಿನ್ನೆಲೆ ಅವರನ್ನು ವಶಕ್ಕೆ ಪಡೆದು ಶಾಂತಿನಗರ ಇಡಿ ಕಚೇರಿಗೆ ಅಧಿಕಾರಿಗಳು ಕರೆದೊಯ್ದಿದ್ದಾರೆ.
ಇನ್ನೂ ಪ್ರಕರಣ ಸಂಬಂಧ ನಟೇಶ್ ಅವರನ್ನು ಬಂಧಿಸುವ ಸಾಧ್ಯತೆಯು ಹೆಚ್ಚಾಗಿದೆ. ಸಮುಡಾದಿಂದ 50:50 ಅನುಪಾತದಲ್ಲಿ 928 ನಿವೇಶನಗಳ ಅಕ್ರಮ ಹಂಚಿಕೆಯಾಗಲು ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಕಾರಣ ಎಂದು ಗಂಭೀರ ಆರೋಪವಿದೆ.
ಈ ಹಿನ್ನೆಲೆಯಲ್ಲಿ ನಟೇಶ್ ಮನೆ ಮೇಲೆ ಸೋಮವಾರ ದಾಳಿ ಮಾಡಿ ಇ.ಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ, ತನಿಖೆಗೆ ನಟೇಶ್ ಅವರು ಸಹಕರಿಸಿಲ್ಲ ಎನ್ನಲಾಗಿದೆ.
ಈ ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲ. ಸರ್ಕಾರದ ಆದೇಶದಂತೆ ಕೆಲಸ ಮಾಡಿದ್ದೇನೆ. ನನಗೆ ಕಾರ್ತಿಕ್ ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಆದ ಬೆಳವಣಿಗೆ ಗೊತ್ತಿಲ್ಲ. ಬಿಲ್ಡರ್ ಮಂಜುನಾಥ್ ಕಾನೂನಾತ್ಮಕವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. 50:50 ಅನುಪಾತದಲ್ಲಿ ಯಾವುದೇ ಅವ್ಯವಹಾರವನ್ನೂ ಮಾಡಿಲ್ಲ. ಸರ್ಕಾರದ ನಡಾವಳಿಯಲ್ಲಿಯೇ ಇದೆ ಶೇ. 50:50 ಅನುಪಾತದಲ್ಲಿ ನೀಡಲಾಗಿದೆ. 2022 ಮತ್ತು 2023 ರಲ್ಲಿ ನಡಾವಳಿ ಬದಲಾವಣೆ ಆಗಿದೆ ಎಂದು ತಿಳಿಸಿದ್ದಾರೆ.