ಬೆಂಗಳೂರು: 2021 ಎಪ್ರಿಲ್ ಮುಷ್ಕರದ ವೇಳೆ ಸುಮಾರು 2000 ಕ್ಕಿಂತ ಹೆಚ್ಚು (ಬಿ.ಎಂ.ಟಿ.ಸಿ ನಿಗಮ ಒಂದರಲ್ಲೇ 1200) ಟ್ರೈನಿ, ಪ್ರೊಬೆಷನರಿ, ಖಾಯಂ ಕಾರ್ಮಿಕರನ್ನು ಮುಷ್ಕರದ ಸೇಡಿನ ಕ್ರಮವಾಗಿ ಆಡಳಿತ ವರ್ಗಗಳು ಸೇವೆಯಿಂದ ವಜಾ ಮಾಡಿದ್ದಾರೆ ಕ.ರಾ.ರ.ಸಾ.ನಿಗಮಗಳ ನೌಕರರ ಫೆಡರೇಷನ್ ನ ಅಧ್ಯಕ್ಷದರಾದ ಹೆಚ್.ಡಿ. ರೇವಣ್ಣ ಹೇಳಿದರು.
ಆಡಳಿತ ವರ್ಗದ ನೌಕರರ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಫೆಡರೇಷನ್ ಅಧ್ಯಕ್ಷ ಹೆಚ್.ಡಿ. ರೇವಣ್ಣ ಸಂಸ್ಥೆಯಲ್ಲಿ 30 ರಿಂದ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಕೆಲವೇ ವರ್ಷಗಳು ಅಥವಾ ತಿಂಗಳುಗಳ ಕಾಲದಲ್ಲಿ ನಿವೃತ್ತಿ ಅಂಚಿನಲ್ಲಿ ಇರುವವರನ್ನು ಸಹ ವಜಾಗೊಳಿಸಿದ್ದಾರೆ. ಸಾವಿರಾರು ಕಾರ್ಮಿಕರ ವರ್ಗಾವಣೆ, ಅಮಾನತ್ತು ಮಾಡಿದ್ದಾರೆ. ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಸೇವೆಗೆ ಪುನರ್ ನೇಮಕ ಮಾಡಬೇಕು, ಹಾಗೂ ಇನ್ನಿತರೆ ಸೇಡಿನ ಕ್ರಮಗಳನ್ನು ರದ್ದುಪಡಿಸಬೇಕೆಂದು ಏಪ್ರಿಲ್ 25 ರಂದು ಆಡಳಿತ ವರ್ಗವೇ ಕರೆದಿದ್ದ ಸಭೆಯಲ್ಲಿ ಕ.ರಾ.ರ.ಸಾ.ನಿಗಮಗಳ ನೌಕರರ ಫೆಡರೇಷನ್ ಲಿಖಿತವಾದ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು ಹಾಗೂ ಸಂಸ್ಥೆಯಲ್ಲಿನ ಇನ್ನಿತರ ಕಾರ್ಮಿಕ ಸಂಘಗಳು ಸಹ ಒತ್ತಾಯಪಡಿಸಿದ್ದರು ಎಂದು ಮಾಹಿತಿ ನೀಡಿದರು.
ಆದರೆ 4 ರಿಂದ 5 ತಿಂಗಳುಗಳು ಕಳೆದರೂ ಸಹ ಸೇವೆಯಿಂದ ವಜಾ ಆದವರನ್ನು ಪುನರ್ ನೇಮಕ ಮಾಡಲಿಲ್ಲ. ಸರ್ಕಾರ ಮತ್ತು ಆಡಳಿತ ವರ್ಗಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದಿನಾಂಕ ಸೆಪ್ಟೆಂಬರ್ 20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದೆವು. ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ ಕಾನ್ಪೆಡರೇಷನ್ ಹಾಗೂ ಹಲವು ಸಂಘಟನೆಗಳು ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿದ್ದರು. ಅಂದೇ ಸಾರಿಗೆ ಸಚಿವ ಶ್ರೀರಾಮಲು ವಿಧಾನ ಸೌಧಕ್ಕೆ ಸಿ.ಐ.ಟಿ.ಯು ಫೆಡರೇಷನ್ ನಿಯೋಗವನ್ನು ಕರೆದು ಮನವಿ ಸ್ವೀಕರಿಸಿದ್ದರು ಮಾತುಕತೆ ನಡೆಸಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಖಚಿತ ಭರವಸೆ ನೀಡಿ ಕಾರ್ಮಿಕ ಸಂಘಟನೆಗಳನ್ನು ಸಭೆ ಕರೆಯುವುದಾಗಿ ತಿಳಿಸಿದ್ದರು ಎಂದರು.
ಸೆಪ್ಟೆಂಬರ್ 21 ರಂದು ಸಾರಿಗೆ ಸಚಿವ ಶ್ರೀರಾಮಲು ನಿವಾಸದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆಯನ್ನು ಕರೆದಿದ್ದರು ಎಲ್ಲಾ ಸಂಘಗಳ ಬೇಡಿಕೆಗಳನ್ನು ಸಹ ಆಲಿಸಿದ್ದರು. ನಂತರ ಸೇವೆಯಿಂದ ವಜಾ ಆದ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಕ ಮಾಡುವುದು ಒಳಗೊಂಡು ಮುಷ್ಕರದ ಸಮಯದಲ್ಲಿನ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದ್ದರು. ಈ ಎಲ್ಲವನ್ನೂ ಮಾಧ್ಯಮಗಳ ಮುಂದೆ ಸಹ ತಿಳಿಸಿದ್ದರು ಮತ್ತು ವಿಧಾನ ಅಧಿವೇಶನದಲ್ಲಿಯೂ ಸಹ ಸಾರಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಘೋಷಿಸಿದ್ದರು ಎಂದು ಹೇಳಿದರು.
ಸಾರಿಗೆ ಕಾರ್ಮಿಕರು ಪುನರ್ ನೇಮಕದ ಆದೇಶಕ್ಕಾಗಿ ಕಾಯುತ್ತಿರುವಾಗಲೇ ಬಿ.ಎಂ.ಟಿ.ಸಿ ಆಡಳಿತ ವರ್ಗ ಪುನಃ 50 ಕ್ಕಿಂತ ಹೆಚ್ಚು ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ನೀಡಿದ್ದಾರೆ. ಸಾರಿಗೆ ಕಾರ್ಮಿಕರಿಗೆ ಬರಸಿಡಿಲು ಬಡಿದಂತಾಗಿದೆ. ಸಿ.ಐ.ಟಿ.ಯು ಫೆಡರೇಷನ್ ಸಪ್ಟೆಂಬರ್ 30 ರಂದು ಸಭೆ ಸೇರಿ ಆಡಳಿತ ವರ್ಗದ ಮುಂದುವರೆದ ದಾಳಿಯನ್ನು ತೀವ್ರವಾಗಿ ಖಂಡಿಸಿ ಸಾರಿಗೆ ಸಚಿವರಿಗೆ ಪತ್ರ ನೀಡಿದ್ದೆವು. ಸರ್ಕಾರ ಮತ್ತು ಸಾರಿಗೆ ಸಚಿವರು ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲ ಎಂದು ದೂರಿದರು.
ಸೇವೆಯಿಂದ ವಜಾ ಆದ ಸಾವಿರಾರು ಕಾರ್ಮಿಕರು ಮತ್ತು ಕುಟುಂಬಗಳು ಕರೋನಾ ಸಂಕಷ್ಟಗಳ ಜೊತೆ ಕಳೆದ 6 ತಿಂಗಳುಗಳಿಂದ ತೀವ್ರವಾದ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹಲವು ಕಾರ್ಮಿಕರು ಮತ್ತು ಕುಟುಂಬಗಳು ಆತ್ಮಹತ್ಯೆ ಪರಿಹಾರ ಅಲ್ಲದಿದ್ದರೂ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ದೌರ್ಜನ್ಯ ಎಲ್ಲೆ ಮೀರುತ್ತಿದೆ ಎಂದು ಕಿಡಿಕಾರಿದರು.
ಈ ಎಲ್ಲದರ ಹಿನ್ನೆಲೆಯಲ್ಲಿ ಸರ್ಕಾರ ಸಾರಿಗೆ ಸಚಿವರು ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಅಕ್ಟೋಬರ್ 27 ರ ಬುಧವಾರ ಬೆಳಿಗ್ಗೆ 11:00 ಘಂಟೆಯಿಂದ ಬಿ.ಎಂ.ಟಿ.ಸಿ ಕೇಂದ್ರ ಕಛೇರಿ ಬಳಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭಾದಿತ ಕಾರ್ಮಿಕರು ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು. ಸಾರಿಗೆ ನಿಗಮಗಳಲ್ಲಿನ ಕಾರ್ಮಿಕ ಸಂಘಗಳು ಮತ್ತು ಕಾರ್ಮಿಕರು ಬೆಂಬಲಿಸುವಂತೆ ಮನವಿ ಮಾಡುತ್ತೇವೆ ಎಂದರು.
ಸಿ.ಐ.ಟಿ.ಯು ಕಾರ್ಮಿಕ ಸಂಘಟೆಗಳ ಪ್ರಮುಖ ಬೇಡಿಕೆಗಳು:
* ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನರ್ ನೇಮಕ ಮಾಡಬೇಕು.
* ವರ್ಗಾವಣೆ ಮಾಡಿರುವ ಎಲ್ಲರನ್ನೂ ವಾಪಸ್ಸು ತರಬೇಕು.
* ಅಮಾನತ್ತು ಮಾಡಿರುವ ಎಲ್ಲರನ್ನೂ ತೆರವು ಮಾಡಬೇಕು. ಹಾಗೂ ಶಿಸ್ತು ಪ್ರಕಿಯೆಗಳನ್ನು ರದ್ದುಮಾಡಬೇಕು.
* ಮುಷ್ಕರದ ಅವಧಿಯನ್ನು ಗೈರು ಹಾಜರಿ ಎಂದು ಪರಿಗಣಿಸಿ ರೂ. 2000 ದಿಂದ 10000 ದಂಡ ವಿದಿಸುತ್ತಿರುವುದನ್ನು ನಿಲ್ಲಿಸಬೇಕು. ಈಗಾಗಲೇ ಹಿಡಿದಿರುವ ದಂಡವನ್ನು ವಾಪಸ್ಸು ಕೊಡಬೇಕು.