Select Your Language

Notifications

webdunia
webdunia
webdunia
webdunia

ಸಹಕಾರ ಸಂಘಗಳ ಧುರೀಣ, ಮಾಜಿ ಸಚಿವ, ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ

ಸಹಕಾರ ಸಂಘಗಳ ಧುರೀಣ, ಮಾಜಿ ಸಚಿವ, ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ
ಬೆಂಗಳೂರು , ಮಂಗಳವಾರ, 17 ನವೆಂಬರ್ 2015 (09:22 IST)
ಮಾಜಿ ಸಚಿವ, ಕೆಜೆಪಿ ಶಾಸಕ ಡಾ. ಗುರುಪಾದಪ್ಪ ನಾಗಮಾರಪಲ್ಲಿ(74) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನವೆಂಬರ್ 11 ರಂದು ಅವರು ತಮ್ಮ 74 ನೇ ಜನ್ಮದಿನವನ್ನಾಚರಿಸಿಕೊಂಡಿದ್ದರು. 7 ಸಲ ಶಾಸಕರಾಗಿದ್ದ ಅವರು 3 ಸಲ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

 
ಸಹಕಾರ ಸಂಘಗಳ ಧುರೀಣ, ರಾಜಕೀಯ ಮುತ್ಸದ್ಧಿ ಬೀದರ್ ಉತ್ತರ ಕ್ಷೇತ್ರದ ಶಾಸಕರಾಗಿದ್ದರು.ನಿನ್ನೆ ರಾತ್ರಿ ಹೃದಯಾಘಾತವಾಗಿದ್ದರಿಂದ ಅವರನ್ನು ಇಂದು ಬೆಳಿಗ್ಗೆ 3.30 ಕ್ಕೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 5 ಗಂಟೆ ಸುಮಾರಿಗೆ ಅವರು ಮರವನ್ನಪ್ಪಿದ್ದಾರೆ.
 
ಇಂದು ಸಂಜೆ 5 ಗಂಟೆಗೆ ವಿಮಾನದ ಮೂಲಕ ಅವರ ಶರೀರವನ್ನು ಬೀದರ್‌ಗೆ ಕೊಂಡೊಯ್ಯಲಾಗುವುದು, ನಾಳೆ 11 ಗಂಟೆಗೆ ಅವರ ಹುಟ್ಟೂರಾದ ಔರಾದ್ ತಾಲ್ಲೂಕಿನ ಚಿಂತಕಿಯಲ್ಲಿ ಅಂತ್ಯಸಂಸ್ಕಾರವನ್ನು ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
 
ಔರಾದ್‍ನ ನಾಗಮಾರಪಲ್ಲಿಯಲ್ಲಿ 1942, ನವೆಂಬರ್ 11ರಂದು ಸಂಗನಬಸಪ್ಪ ಅವರ ಪುತ್ರರಾಗಿ ಜನಿಸಿದ್ದ ಗುರುಪಾದಪ್ಪ ಅವರು ಕೃಷಿ ಕುಟುಂಬ. 1985ರಿಂದ 2007 ರವರೆಗೆ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕರಾಗಿ, 1989ರಲ್ಲಿ ಗೃಹ ರಾಜ್ಯ ಸಚಿವರಾಗಿ, 1996-1998ರ ಅವಧಿಯಲ್ಲಿ ಸಂಪುಟ ದರ್ಜೆಯ ಅರಣ್ಯ ಸಚಿವ, 2005-2006ರ ಅವಧಿಯಲ್ಲಿ ಸಂಪುಟ ದರ್ಜೆಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
 
ಸಹಕಾರ ಕ್ಷೇತ್ರದಲ್ಲಿ ಬೀದರ್‌ಗೆ ಇವರು ಅಪಾರ ಕೊಡುಗೆ ಸಲ್ಲಿಸಿದ್ದು 1987ರಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಸ್ವ-ಸಹಾಯ ಗುಂಪುಗಳನ್ನು ರಚಿಸಿದ ಕೀರ್ತಿ ಇವರದು. ದೇಶದಲ್ಲಿಯೇ ಪ್ರಥಮವೆಂದೆನಿಸಿದ ಸುಸಜ್ಜಿತವಾದ ಮತ್ತು ಹೈಟೆಕ್ ತಂತ್ರಜ್ಞಾನವನ್ನು ಒಳಗೊಂಡ ಒಂದು ಸಹಕಾರ ತರಬೇತಿ ಕೇಂದ್ರವನ್ನು (ಸೌಹಾರ್ದ) ಬೀದರ್‍‌ನಲ್ಲಿ  ಸ್ಥಾಪಿಸಿದ ಹೆಗ್ಗಳಿಕೆ ಅವರಾಗಿದೆ.
 
ಗೌರವ ಡಾಕ್ಟರೇಟ್‌‌ನ್ನು ಸಹ ಪಡೆದುಕೊಂಡಿದ್ದ ನಾಗಪಾರಪಲ್ಲಿ ಅವರಿಗೆ 5 ಜನ ಗಂಡು ಮಕ್ಕಳು 2 ಜನ ಹೆಣ್ಣು ಮಕ್ಕಳಿದ್ದು ಪತ್ನಿ ಈಗಾಗಲೇ ವಿಧಿವಶರಾಗಿದ್ದಾರೆ. 

Share this Story:

Follow Webdunia kannada