ಬೆಳಗಾವಿ : ದೇವರ ಮುಂದಿಟ್ಟ ಬೇಡಿಕೆ ಈಡೇರುವವರೆಗೂ ಸಚಿವ ಸಂಪುಟ ಸಭೆಗೆ ಹಾಜರಾಗುವುದಿಲ್ಲ ಎಂದು ಪೌರಾಡಳಿತ ಮತ್ತು ಬಂದರು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ‘ಇದುವರೆಗೂ 5 ಸಚಿವ ಸಂಪುಟ ಸಭೆಗೆ ಗೈರು ಹಾಜರಾಗಿದ್ದೇನೆ. ದೇವರಲ್ಲಿ ಏನೋ ಕೇಳಿಕೊಂಡಿದ್ದೇನೆ. ಅದು ಆಗುವವರೆಗೂ ಹೋಗಲ್ಲ. ಆದರೆ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷ ಗ್ರಂಥಾಲಯ ಖಾತೆ ಕೊಟ್ಟರು ನಡೆಸಲು ಸಿದ್ಧ’ ಎಂದು ಹೇಳಿದ್ದಾರೆ.
ಹಾಗೇ ಸರ್ಕಾರಿ ವಾಹನ ಬಳಕೆ ಮಾಡದಿರುವ ಕುರಿತು ಮಾತನಾಡಿದ ಅವರು ‘ಕೆಲ ವಿಚಾರದಲ್ಲಿ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ಆ ಕೆಲಸ ಆಗುವವರೆಗೂ ಸರ್ಕಾರಿ ಕಾರು ಬಳಕೆ ಮಾಡುವುದಿಲ್ಲ ಎಂಬ ತೀರ್ಮಾನ ಮಾಡಿದ್ದೇನೆ. ಅಲ್ಲದೇ ಮುಂದಿನ ಸಚಿವ ಸಂಪುಟ ಸಭೆಗೂ ಗೈರು ಹಾಜರಾಗುತ್ತೇನೆ. ಕೆಲ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳುವುದಕ್ಕೆ ಹೋಗಲ್ಲ. ಸಚಿವ ಸ್ಥಾನಕ್ಕಿಂತ ಧಾರ್ಮಿಕ ನಂಬಿಕೆ ನನಗೆ ಮಹತ್ವ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.