Select Your Language

Notifications

webdunia
webdunia
webdunia
webdunia

ಲೋಕಾಯುಕ್ತ ಪದಚ್ಯುತಿ ವಿಚಾರ: ಪ್ರತಿಪಕ್ಷಗಳ ಮನವಿ ತಿರಸ್ಕರಿಸಿದ ಕಾಗೋಡು

ಲೋಕಾಯುಕ್ತ ಪದಚ್ಯುತಿ ವಿಚಾರ: ಪ್ರತಿಪಕ್ಷಗಳ ಮನವಿ ತಿರಸ್ಕರಿಸಿದ ಕಾಗೋಡು
ಬೆಳಗಾವಿ , ಸೋಮವಾರ, 6 ಜುಲೈ 2015 (13:33 IST)
ಲೋಕಾಯುಕ್ತ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ರಾಜ್ಯದ ಮುಖ್ಯ ಲೋಕಾಯುಕ್ತರು ಆರೋಪಿಯಾಗಿದ್ದು, ಅವರನ್ನು ಪದಚ್ಯುತಿಗೊಳಿಸುವ ಸಲುವಾಗಿ ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿ ಪ್ರತಿಪಕ್ಷಗಳು ಸಲ್ಲಿಸಿದ್ದ ಮನವಿಯನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಇಂದು ತಿರಸ್ಕರಿಸಿದ್ದಾರೆ.  
 
ಸದನದಲ್ಲಿ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಹಾಗೂ ಜೆಡಿಎಸ್ ಸದಸ್ಯ ವೈ.ಎಸ್.ವಿ.ದತ್ತಾ ಅವರು ಲೋಕಾಯುಕ್ತರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪದವಿಯಿಂದ ಪದಚ್ಯುತಿಗೊಳಿಸಬೇಕಿದೆ. ಆದ್ದರಿಂದ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಎಂದು ಪ್ರಸ್ತಾಪ ಮಂಡಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ತಾವು ಮನವಿಯಲ್ಲಿ ಯಾವ ಕಾರಣದಿಂದ ಪದಚ್ಯುತಿಗೊಳಿಸಬೇಕು ಎಂದು ತಿಳಿಸಿಲ್ಲ. ಅಲ್ಲದೆ ಈ ಪ್ರಕರಣವು ಗಂಭೀರವಾದದ್ದಾಗಿದ್ದು, ಎಚ್ಚರದಿಂದ ಹೆಜ್ಜೆ ಇಡಬೇಕಿದೆ. ಆದ್ದರಿಂದ ಸಂಪೂರ್ಣ ವಿವರವುಳ್ಳ ಮನವಿಯನ್ನು ಸದನದಲ್ಲಿ ಪ್ರಸ್ತಾಪಿಸಿ, ಬಳಿಕ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಏಕೆಂದರೆ ನಾವು ಇಂದು ಕೈಗೊಳ್ಳುವ ನಿರ್ಧಾರಗಳ ಬಗ್ಗೆ ಭವಿಷ್ಯದಲ್ಲಿ ಚರ್ಚೆಯಾಗಬಾರದು ಎಂದು ಪ್ರತಿಪಕ್ಷಗಳ ಸದಸ್ಯರಿಗೆ ಸಲಹೆ ನೀಡಿದರು. ಅಲ್ಲದೆ ಮನವಿಯನ್ನು ತಿರಸ್ಕರಿಸಿದರು. ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೂ ಕೂಡ ಪ್ರತಿಕ್ರಿಯಿಸಿ ಮನವಿಗೆ ಸ್ಪಂಧಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಆದರೂ ಸಭಾಧ್ಯಕ್ಷರು ಮನವಿಯನ್ನು ತಿರಸ್ಕರಿಸಿದರು. 
 
ಇನ್ನು ಕಳೆದ ಶುಕ್ರವಾರ 57 ಮಂದಿ ಜನಪ್ರತಿನಿಧಿಗಳಿಂದ ಸಹಿ ಸಂಗ್ರಹಿಸಿದ್ದ ಪ್ರತಿಪಕ್ಷ ನಾಯಕರು, ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಅಲ್ಲದೆ ಇಂದು ಚರ್ಚೆಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಪ್ರಸ್ತುತ ಸಭಾಧ್ಯಕ್ಷರು ತಿರಸ್ಕರಿಸಿದ್ದು, ನಾ.ಕರಲ್ಲಿ ಬೇಸರ ಆವರಿಸಿಕೊಂಡಿದೆ.  
 
ಏನಿದು ಪ್ರಕರಣ?: 
ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಒಂದು ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಬೆಂಗಳೂರು ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಆದರೆ ಅವರ ತನಿಖೆಗೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರು ತಡೆ ನೀಡಿ ಪ್ರಕರಣವನ್ನು ತಮ್ಮ ಸ್ವಂತ ಅಧಿಕಾರ ಬಳಸಿ ಸಿಸಿಬಿಗೆ ವಹಿಸಿದ್ದರು. 
 
ಈ ಸಂಬಂಧ ಪ್ರತಿಕ್ರಿಯಿಸಿದ್ದ ರಾಜ್ಯದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಸಿಸಿಬಿಗೆ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿರುವಾಗಿ ಮುಖ್ಯ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ ಎಂದು ಆರೋಪಿಸಿದ್ದರು. ಇದು ಲೋಕಾಯುಕ್ತ ಇಲಾಖೆ ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರ, ಪ್ರಸ್ತುತ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸದಸ್ಯರು ವಿಶೇಷ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. 
 
ಇನ್ನು ಪ್ರಕರಣದಲ್ಲಿ ಲೋಕಾಯುಕ್ತ ಇಲಾಖೆಯ ಜಂಟಿ ಆಯುಕ್ತ ರಿಯಾಜ್, ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಹಾಗೂ ಅವರ ಸಂಬಂಧಿ ಆಂಧ್ರ ಮೂಲದ ಕೃಷ್ಣ ರಾವ್ ಅಲಿಯಾಸ್ ನರಸಿಂಹ ರಾವ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

Share this Story:

Follow Webdunia kannada